ಹೈದರಾಬಾದ್: ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಎಷ್ಟು ಸಂಕಷ್ಟಕ್ಕೀಡಾಗಿದ್ದಾರೆ ಎಂಬುದನ್ನು ನೋಡಿದ್ದೇವೆ. ಅವರ ವಿರುದ್ಧ ಹಲವು ಕೇಸ್ಗಳು ದಾಖಲಾಗಿದ್ದು ಒಂದೆಡೆಯಾದರೆ, ನೂಪುರ್ಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದು ಇನ್ನೊಂದೆಡೆ. ಈ ಮಧ್ಯೆ ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ (Telangana BJP MLA T Raja Singh)ಕೂಡ ಇದೇ ಕೇಸ್ನಲ್ಲಿ ಸಿಲುಕಿದ್ದಾರೆ. ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ ರಾಜಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಟಿ. ರಾಜಾ ಸಿಂಗ್ ಘೋಶಾಮಹಲ್ ಕ್ಷೇತ್ರದ ಶಾಸಕನಾಗಿದ್ದು, ಅವರು ಪ್ರವಾದಿ ಬಗ್ಗೆ ಅವಹೇಳನ ಮಾಡಿದ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಸೋಮವಾರ ರಾತ್ರಿ ಹೈದರಾಬಾದ್ನ ಪೊಲೀಸ್ ಆಯುಕ್ತ ಸಿವಿ ಆನಂದ್ ಕಚೇರಿ ಎದುರು, ದಬೀರ್ಪುರ, ಭವಾನಿನಗರ್, ರೇನ್‌ಬಜಾರ್ ಮತ್ತು ಮಿರ್‌ಚೌಕ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆದಿತ್ತು. ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ರಾಜಾ ಸಿಂಗ್ರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ದಬೀರ್ಪುರ ಠಾಣೆಯಲ್ಲಿ ಈಗ ರಾಜಾ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿತ್ತು. ಇದೀಗ ಅವರನ್ನು ಅರೆಸ್ಟ್ ಮಾಡಲಾಗಿದೆ.
ಕಾಮಿಡಿಯನ್ ಮುನಾವರ್ ಫಾರೂಕಿಗೂ ರಾಜಾ ಸಿಂಗ್ ಬೆದರಿಕೆ ಒಡ್ಡಿದ್ದರು. ಹೈದರಾಬಾದ್ನಲ್ಲಿ ಮುನಾವರ್ ಕಾರ್ಯಕ್ರಮವನ್ನು ಆಗಸ್ಟ್ 20ರಂದು ಆಯೋಜಿಸಲಾಗಿತ್ತು. ಆದರೆ ಅದನ್ನು ತಡೆಯಲು ರಾಜಾ ಸಿಂಗ್ ಮತ್ತು ಅವರ ಸಹಚರರು ತುಂಬ ಪ್ರಯತ್ನಿಸಿದ್ದರು. ‘ಮುನಾವರ್ ಫಾರೂಕಿ ಹಿಂದು ದೇವರು-ದೇವತೆಗಳನ್ನು ಅಪಹಾಸ್ಯ ಮಾಡುತ್ತಾನೆ. ಹಾಗಾಗಿ ಆತನ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ. ಮುನಾವರ್ ಸಮಾರಂಭ ನಡೆಯುವ ಸ್ಥಳಕ್ಕೆ ಬೆಂಕಿ ಹಚ್ಚುತ್ತೇವೆ’ ಎಂದೂ ಇವರು ಬೆದರಿಕೆ ಒಡ್ಡಿದ್ದರು. ಅವರು ಹೀಗೆ ಬೆದರಿಕೆ ಹಾಕಿದ ವಿಡಿಯೋಗಳನ್ನೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದರು. ಆಗ ಮುನ್ನೆಚ್ಚರಿಕೆ ಕ್ರಮವಾಗಿ ರಾಜಾ ಮತ್ತು ಅವರ ನಾಲ್ವರು ಸಹಚರರನ್ನು ಕಸ್ಟಡಿಗೆ ಕರೆದುಕೊಂಡು ಹೋಗಲಾಗಿತ್ತು. ಅಂದಹಾಗೇ, ಆ ಕಾರ್ಯಕ್ರಮ ನಿಗದಿತ ದಿನದಂದು ಯಶಸ್ವಿಯಾಗಿ ನಡೆದಿದೆ.
ಇದನ್ನೂ ಓದಿ: ISIS terror | ರಷ್ಯದಲ್ಲಿ ಸಿಕ್ಕಿಬಿದ್ದ ಐಸಿಸ್ ಉಗ್ರನಿಗೆ ಆನ್‌ಲೈನ್‌ನಲ್ಲೇ ತರಬೇತಿ, ನೂಪುರ್ ಶರ್ಮಾ ಕೊಲ್ಲಲು ಸ್ಕೆಚ್