ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ‘ರಾವಣ’ ಎಂದು ಕರೆದಿದ್ದ ಕೇಂದ್ರ ಜಲ ಶಕ್ತಿ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ರಾಜಸ್ಥಾನ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಸುರೇಂದ್ರ ಸಿಂಗ್ ಅವರು ಚಿತ್ತೋರ್ಗಢ್ ಜಿಲ್ಲೆಯ ಪೊಲೀಸ್ ಸ್ಟೇಶನ್ನಲ್ಲಿ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ದೂರು ದಾಖಲಿಸಿದ್ದರು. ಕೇಂದ್ರ ಸಚಿವರು ಮುಖ್ಯಮಂತ್ರಿಗೆ ಅವಹೇಳನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಚಿತ್ತೋರ್ಗಢ್ನಲ್ಲಿ ನಡೆದ ಬಿಜೆಪಿ ಜನಾಕ್ರೋಶ ಸಭೆಯಲ್ಲಿ ಮಾತನಾಡಿದ್ದ ಗಜೇಂದ್ರ ಸಿಂಗ್ ಶೇಖಾವತ್, ‘ರಾವಣನಿಗೆ 10 ತಲೆಗಳಿವೆ. ಅದರಂತೆಯೇ ರಾಜಸ್ಥಾನ ಸರ್ಕಾರ ಮತ್ತು ಇಲ್ಲಿನ ರಾಜಕಾರಣದ ರಾವಣನಿಗೂ 10 ತಲೆಗಳಿವೆ. ಮಾಫಿಯಾ ರಾಜ್ಯ ಮತ್ತು ಗೂಂಡಾ ರಾಜ್ಯವನ್ನು ಈ ಸರ್ಕಾರ ಪೋಷಿಸುತ್ತಿದೆ. ಇದು ಸುಲಿಗೆ ಮಾಡುವವರ, ನಿರುದ್ಯೋಗ ಸೃಷ್ಟಿಸುವವರ, ವಿಶ್ವಾಸದ್ರೋಹ ಹರಡುವವರ ಸರ್ಕಾರ. ರಾಜಸ್ಥಾನದಲ್ಲಿ ಈ ರಾವಣನ ರಾಜಕೀಯವನ್ನು ಕೊನೆಗೊಳಿಸಿ, ರಾಮರಾಜ್ಯ ಸ್ಥಾಪಿಸಬೇಕು. ಯಾರಿಗೆಲ್ಲ ಈ ರಾವಣನ ಆಡಳಿತ ಕೊನೆಗೊಳಿಸಬೇಕು ಎಂದಿದೆಯೋ ಅವರು ಕೈಯೆತ್ತಿ’ ಎಂದು ಹೇಳಿದ್ದರು. ಹೀಗೆ ರಾಜಸ್ಥಾನ ಮುಖ್ಯಮಂತ್ರಿಯನ್ನು ರಾವಣನಿಗೆ ಹೋಲಿಸಿದ ಶೇಖಾವತ್ ವಿರುದ್ಧ ಕಾಂಗ್ರೆಸ್ ನಾಯಕ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಇನ್ನು ಗಜೇಂದ್ರ ಶೇಖಾವತ್ ಹೇಳಿಕೆಗೆ ತಿರುಗೇಟು ನೀಡಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ‘ಗಜೇಂದ್ರ ಶೇಖಾವತ್ ಅವರು ನನ್ನನ್ನು ರಾವಣ ಎಂದಿದ್ದಾರೆ. ರಾವಣ ಆಡಳಿತವನ್ನು ಕೊನೆಯಾಗಿಸಬೇಕು ಎಂದಿದ್ದಾರೆ. ಒಳ್ಳೇದಾಗಲಿ, ನಾನಿದನ್ನು ಸ್ವಾಗತಿಸುತ್ತೇನೆ. ನಾನು ರಾವಣನೇ ಎಂದಿಟ್ಟುಕೊಳ್ಳೋಣ. ಹಾಗಿದ್ದ ಮೇಲೆ ನೀವು ಮರ್ಯಾದಾ ಪುರುಷೋತ್ತಮ ರಾಮನಾಗಿ. ಬಡವರಿಗೆ ಅವರ ಹಣವನ್ನು ತಿರುಗಿಸಿ ಕೊಡಿ’ ಎಂದಿದ್ದರು.