ಹೈದರಾಬಾದ್: ಎಟಿಎಂ ಕಾರ್ಡ್ ಹಾಕಿದರೆ ನಗದು ಕೊಡುವ ಎಟಿಂಗಳನ್ನು ನಾವು ದೇಶಾದ್ಯಂತ ಎಲ್ಲ ಕಡೆ ನೋಡಿದ್ದೇವೆ. ಆದರೆ ಚಿನ್ನದ ನಾಣ್ಯ ಕೊಡುವ ಎಟಿಎಂ ಎಲ್ಲಾದರೂ ಕಂಡೀದ್ದೀರಾ?-ಇಷ್ಟು ದಿನ ಇರಲಿಲ್ಲ. ಆದರೆ ಇನ್ನು ನೀವದನ್ನು ನೋಡಬಹುದು ಮತ್ತು ಅಲ್ಲಿಗೆ ಹೋಗಿ ನಿಮ್ಮ ಡೆಬಿಟ್-ಕ್ರೆಡಿಟ್ಗಳನ್ನು ಹಾಕುವ ಮೂಲಕ ಚಿನ್ನದ ನಾಣ್ಯ ಪಡೆಯಬಹುದು!
ದೇಶದ ಮೊಟ್ಟ ಮೊದಲ ಚಿನ್ನದ ಎಟಿಎಂ (ಅಟೋಮೇಟೆಡ್ ಟೆಲ್ಲರ್ ಮಶಿನ್) ಹೈದರಾಬಾದ್ನ ಬೇಗಂಪೇಟ್ನಲ್ಲಿ ಸ್ಥಾಪಿತವಾಗಿದೆ. ಹೈದರಾಬಾದ್ ಮೂಲದ ಚಿನ್ನಾಭರಣ ತಯಾರಿಕಾ ಕಂಪನಿಯಾದ ಗೋಲ್ಡ್ಸಿಕ್ಕಾ ಪ್ರೈವೇಟ್ ಲಿಮಿಟೆಡ್ ಈ ವಿನೂತನ ಪ್ರಯೋಗ ಮಾಡಿದೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಗೋಲ್ಡ್ ಎಟಿಎಂಗಳು ಇವೆ. ಚಿನ್ನದ ಬಾರ್ಗಳನ್ನು ನೀಡುವ ಎಟಿಎಂಗಳೂ ಇದ್ದಾವೆ. ಆದರೆ ಬೇಗಂಪೇಟ್ನಲ್ಲಿ ಇದೀಗ ಉದ್ಘಾಟನೆಗೊಂಡಿರುವ ಎಟಿಎಂ ದೇಶದಲ್ಲೇ ಮೊದಲ ಚಿನ್ನದ ಎಟಿಎಂ ಎನ್ನಿಸಿಕೊಂಡಿದೆ.
ಚಿನ್ನದ ನಾಣ್ಯಗಳನ್ನು ತೆಗೆಯುವುದು ಹೇಗೆ?
ಗ್ರಾಹಕರು ಎಟಿಎಂನಲ್ಲಿ ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಹಾಕಿ, ಇ-ಕಾರ್ಡ್ ಪಿನ್ ಕೊಡಬೇಕು. ಇಲ್ಲಿ 0.5 ಗ್ರಾಂ ನಿಂದ ಹಿಡಿದು 100 ಗ್ರಾಂ. ಚಿನ್ನದ ನಾಣ್ಯಗಳವರೆಗೆ ಲಭ್ಯವಿದ್ದು, ಗ್ರಾಹಕರು ತಮಗೆ ಎಷ್ಟು ಬೇಕೋ, ಅಷ್ಟನ್ನು ನಮೂದಿಸಬೇಕು. ಆಗ ಮಶಿನ್ನಿಂದ ಚಿನ್ನದ ನಾಣ್ಯಗಳು ಟ್ಯಾಂಪರ್ ಪ್ರೂಫ್ ಪ್ಯಾಕೆಟ್ನಲ್ಲಿ ಹೊರಬರುತ್ತದೆ. ಕ್ಯಾಶ್ ತೆಗೆಯುವಾಗ ಏನು ಪ್ರಕ್ರಿಯೆಗಳು ಇರುತ್ತವೆಯೋ, ಅವೇ ಪ್ರಕ್ರಿಯೆಗಳನ್ನು ನಡೆಸಬೇಕು. ಎಲ್ಲವರೂ 100 ಪರ್ಸೆಂಟ್ ಪಾರದರ್ಶಕವಾಗಿರುತ್ತದೆ ಎನ್ನುತ್ತಾರೆ ಗೋಲ್ಡ್ಸಿಕ್ಕಾ ಕಂಪನಿಯ ಸಿಇಒ ಎಸ್.ವೈ. ತರುಜ್.
ಸದ್ಯ ಬೇಗಂಪೇಟ್ನಲ್ಲಿರುವ ಗೋಲ್ಡ್ಸಿಕ್ಕಾ ಕಂಪನಿಯ ಆವರಣದಲ್ಲೇ ಈ ಎಟಿಎಂ ಸ್ಥಾಪಿತವಾಗಿದ್ದು, ಏರ್ಪೋರ್ಟ್, ಓಲ್ಡ್ಸಿಟಿ, ಕರೀಮ್ನಗರ ಮತ್ತು ವಾರಂಗಲ್ಗಳಲ್ಲಿ ಕೂಡ ಒಂದೊಂದು ಚಿನ್ನದ ಎಟಿಎಂ ಸ್ಥಾಪಿಸುವ ಆಶಯವನ್ನು ಗೋಲ್ಡ್ಸಿಕ್ಕಾ ಕಂಪನಿ ವ್ಯಕ್ತಪಡಿಸಿದೆ. ಹಾಗೇ, ದೇಶಾದ್ಯಂತ ಇನ್ನು ಎರಡುವರ್ಷಗಳಲ್ಲಿ ಒಟ್ಟಾರೆ 3 ಸಾವಿರ ಚಿನ್ನದ ಎಟಿಎಂ ಮಶಿನ್ಗಳ ಅಳವಡಿಕೆ ಮಾಡುವುದಾಗಿಯೂ ಸಿಇಒ ತರುಜ್ ತಿಳಿಸಿದ್ದಾರೆ. ಅಂದಹಾಗೇ, ಗೋಲ್ಡ್ಸಿಕ್ಕಾ ಕಂಪನಿಗೆ ಗೋಲ್ಡ್ ಎಟಿಎಂ ಸ್ಥಾಪಿಸಲು ಸಹಾಯ ಮಾಡಿದ್ದು, ಹೈದರಾಬಾದ್ ಮೂಲದ ‘ಓಪನ್ ಕ್ಯೂಬ್ ಎಂಬ ಸ್ಟಾರ್ಟ್ಅಪ್.
ಇದನ್ನೂ ಓದಿ: Viral Video | ಬೆಂಗಳೂರಲ್ಲಿದೆ ವಿಶಿಷ್ಟ ಎಟಿಎಂ; ದಿನದ 24 ಗಂಟೆಯೂ ಬಿಸಿಬಿಸಿ ಇಡ್ಲಿ ಲಭ್ಯ!