ಪಂಜಾಬ್ನ ಗೋಲ್ಡನ್ ಟೆಂಪಲ್ (Punjab Golden Temple)ಬಳಿ ಮೂರು ಬಾರಿ ಸ್ಫೋಟವಾಗಿದೆ. ಒಂದು ವಾರದಲ್ಲಿ ಇಂದು ಮೂರನೇ ಬಾರಿಗೆ ಸ್ಫೋಟವಾಗಿದ್ದು ಆತಂಕಕ್ಕೆ ಕಾರಣವಾಗಿದೆ ಮತ್ತು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಗುರುವಾರ ತಡರಾತ್ರಿ 12.30ರ ಹೊತ್ತಿಗೆ ಸ್ವರ್ಣ ಮಂದಿರದ ಬಳಿ ಸ್ಫೋಟವಾದ ಬೆನ್ನಲ್ಲೇ, ಈ ಘಟನೆಯಲ್ಲಿ ಕೈವಾಡ ಇರುವ ಅನುಮಾನದಡಿ ಐವರನ್ನು ಬಂಧಿಸಲಾಗಿದೆ. ಈ ಮೂರು ಸ್ಫೋಟಗಳ ಹಿಂದಿನ ಉದ್ದೇಶ ಕೇವಲ ಶಾಂತಿಯನ್ನು ಕದಡುವುದು ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.
ಮೇ 6 ಮತ್ತು 8ರಂದು ಒಂದರ ಬೆನ್ನಿಗೆ ಒಂದರಂತೆ ಸ್ಫೋಟ ನಡೆದಿತ್ತು. ಸ್ವರ್ಣ ಮಂದಿರದ ಸಮೀಪದಲ್ಲಿರುವ ಒಂದು ಪಾರ್ಕಿಂಗ್ ಸ್ಥಳದ ಬಳಿಯೇ ಎರಡೂ ಸ್ಫೋಟಗಳು ಆಗಿದ್ದವು. ಹೀಗೆ ಮೂರು ಸ್ಫೋಟಗಳಾದ ಬೆನ್ನಲ್ಲೇ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಮಿ ಅವರು ಪಂಜಾಬ್ ಸರ್ಕಾರವನ್ನು ದೂಷಿಸಿದ್ದಾರೆ. ಎರಡು ಸ್ಫೋಟವಾಗಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಸರಿಯಾದ ಕ್ರಮ ವಹಿಸಲಿಲ್ಲ. ಹೀಗಾಗಿಯೇ ಮೂರನೇ ಸ್ಫೋಟವಾಯಿತು. ಗುರು ರಾಮದಾಸ್ ಸೇರಾಯಿಯಲ್ಲಿ ವಾಸವಾಗಿರುವ ಒಂದು ನವದಂಪತಿ ಮತ್ತು ಇನ್ನೊಬ್ಬನನ್ನು ಗುರುದ್ವಾರದ ಸೆಕ್ಯೂರಿಟಿ ಸ್ಕ್ವಾಡ್ನವರು ವಶಕ್ಕೆ ಪಡೆದು, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂರೂ ಸ್ಫೋಟದ ಹಿಂದೆಯೂ ಇವರ ಕೈವಾಡ ಇದೆ. ಆ ದಂಪತಿ ಅವರು ಉಳಿದುಕೊಂಡಿರುವ 224 ನಂಬರ್ನ ಕೋಣೆಯ ಬಾತ್ರೂಮ್ನಿಂದ ಸ್ಫೋಟಕವನ್ನು ಹೊರಗೆ ಎಸೆದಿದ್ದಾರೆ. ಪೊಲೀಸರು ಆ ಕೋಣೆಯಿಂದ ಕೆಲವು ಕೈಬರಹದ ಪತ್ರಗಳನ್ನು, ಪಟಾಕಿಯಂಥ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧ್ಯಕ್ಷ ಹರ್ಜಿಂದರ್ ಸಿಂಗ್ ತಿಳಿಸಿದ್ದಾರೆ. ಇನ್ನು ಇದು ಮೂರು ಘಟನೆಗೆ ಉಗ್ರ ಲಿಂಕ್ ಇಲ್ಲ ಎಂದು ಈಗಾಗಲೇ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದಾಗ್ಯೂ ಅದೊಂದು ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Golden Temple: ಪಂಜಾಬ್ ಸ್ವರ್ಣಮಂದಿರದ ಬಳಿ ಮತ್ತೊಂದು ಸ್ಫೋಟ; ಸ್ಥಳದಲ್ಲಿ ಆತಂಕ
ಮೇ 6ರಂದು ಮೊದಲ ಸ್ಫೋಟ ನಡೆದಾಗ ಅದು ಗ್ಯಾಸ್ ಲೀಕ್ನಿಂದ ಆಗಿದ್ದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು. ಅಂದು ಸುತ್ತಲೂ ಇರುವ ಕೆಲವು ಕಟ್ಟಡಗಳಿಗೆ ಹಾನಿಯಾಗಿತ್ತು. ಅದಾಗಿ ಒಂದು ದಿನದ ನಂತರ ಮೇ 8ರಂದು ಮತ್ತೆ ಸ್ಫೋಟವಾದಾಗ ಪೊಲೀಸರು ಮತ್ತಷ್ಟು ಬಿರುಸಾಗಿ ತನಿಖೆ ನಡೆಸಿದ್ದರು. ಈಗ ಮೂರನೇ ಸ್ಫೋಟವಾದಾಗ ಸ್ಥಳೀಯರು ತಿರುಗಿಬಿದ್ದಿದ್ದಾರೆ. ಗೋಲ್ಡನ್ ಟೆಂಪಲ್ ಪ್ರವೇಶ ದ್ವಾರದಲ್ಲಿ ಒಂದು ಸ್ಕ್ಯಾನರ್ ಅಳವಡಿಸಬೇಕು ಎಂದು ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಮಿ ಒತ್ತಾಯಿಸಿದ್ದಾರೆ.