ಬೆಂಗಳೂರು: ಸಾಮಾನ್ಯವಾಗಿ ವಿಮಾನಗಳು ತುರ್ತು ಲ್ಯಾಂಡ್ (Flight Emergency Landing) ಆಗುವುದು ತಾಂತ್ರಿಕ ದೋಷವುಂಟಾದಾಗ, ಹವಾಮಾನ ವೈಪರೀತ್ಯವಾದಾಗ ಅಥವಾ ಅದರೊಳಗೆ ಇರುವ ಯಾರದ್ದಾದರೂ ಆರೋಗ್ಯ ತೀವ್ರ ಹದಗೆಟ್ಟಾಗ. ಆದರೆ ಇಲ್ಲೊಂದು ವಿಮಾನವನ್ನು ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಿದ್ದು ಕುಡುಕನೊಬ್ಬನ ಕಾರಣದಿಂದ. ಕಂಠ ಪೂರ್ತಿ ಕುಡಿದ ವ್ಯಕ್ತಿಯೊಬ್ಬ ಫ್ಲೈಟ್‌ನಲ್ಲಿ ಸೃಷ್ಟಿಸಿದ ಅವಾಂತರ ಕಾರಣದಿಂದ ವಿಮಾನವೇ ಎಮರ್ಜನ್ಸಿ ಲ್ಯಾಂಡಿಂಗ್ ಆಗಿದೆ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇಂಡಿಗೋ ಸಂಸ್ಥೆಯ ವಿಮಾನ ಕತಾರ್‌ನ ದೋಹಾದಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು. ಆದರೆ ವ್ಯಕ್ತಿಯೊಬ್ಬ ಸಿಕ್ಕಾಪಟೆ ಮದ್ಯಪಾನ ಮಾಡಿಕೊಂಡು ಫ್ಲೈಟ್ ಹತ್ತಿದ್ದ. ಅವನು ಸುಮ್ಮನೆ ಕುಳಿತುಕೊಳ್ಳುವ ಬದಲು ತುಂಬ ಗಲಾಟೆ ಮಾಡಿದ್ದಾನೆ. ಗಗನಸಖಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅವನನ್ನು ಸಮಾಧಾನ ಪಡಿಸಲು ವಿಮಾನದ ಸಿಬ್ಬಂದಿ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಅದೆಷ್ಟರ ಮಟ್ಟಿಗೆ ಗಲಾಟೆ ಮಾಡುತ್ತಿದ್ದನೆಂದರೆ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಇದರಿಂದ ಉಳಿದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗುತ್ತಿತ್ತು. ಹಾಗಾಗಿ ಪೈಲಟ್ ಮುಂಬೈನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಬೇಕಾಯಿತು.
ಮುಂಬೈನಲ್ಲಿ ವಿಮಾನ ಭೂಸ್ಪರ್ಶವಾಗುತ್ತಿದ್ದಂತೆ ಸಹರ್ ಪೊಲೀಸರು ಕುಡುಕನನ್ನು ಬಂಧಿಸಿದ್ದಾರೆ. ಅಂದಹಾಗೇ, ಈ ವ್ಯಕ್ತಿಯ ಹೆಸರು ಮೊಹಮ್ಮದ್ ಸರ್ಫುದ್ದೀನ್ ಉಲ್ವಾರ್ ಎಂದಾಗಿದ್ದು, ಸದ್ಯ ಕೇಸ್ ದಾಖಲಾಗಿದೆ. ಶನಿವಾರ ರಾತ್ರಿಯೇ ಈತನನ್ನು ಪೊಲೀಸರು ಬಂಧಿಸಿದ್ದು, ಭಾನುವಾರವೂ ಒಂದು ದಿನ ಕಸ್ಟಡಿಯಲ್ಲೇ ಇದ್ದ.
ಇದನ್ನೂ ಓದಿ | VIRAL VIDEO: ತುರ್ತು ಭೂಸ್ಪರ್ಶದ ವೇಳೆ ಎರಡು ತುಂಡಾದ ಕಾರ್ಗೊ ವಿಮಾನ