ನವ ದೆಹಲಿ: ಬಜೆಟ್ ಮಂಡನೆ ಬಳಿಕ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮೊಟ್ಟಮೊದಲಿಗೆ ವೈಯಕ್ತಿಕ ಹಣಕಾಸು ತೆರಿಗೆ ಬಗ್ಗೆ ಪ್ರಸ್ತಾಪಿಸಿದರು. ‘ಈ ಸಲದ ಬಜೆಟ್ನಲ್ಲಿ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ ತೆರಿಗೆ ಪದ್ಧತಿಗೆ ಪ್ರೋತ್ಸಾಹ ನೀಡಲಾಗಿದೆ. ಇದರಿಂದಾಗಿ ಜನಸಾಮಾನ್ಯರು ಸುಲಭವಾಗಿ ಹಳೇ ತೆರಿಗೆ ಪದ್ಧತಿಯಿಂದ ಹೊರಬಂದು, ಹೊಸ ಪದ್ಧತಿಗೆ ಹೊಂದಿಕೊಳ್ಳಬಹುದು’ ಎಂದು ಹೇಳಿದರು.
‘ಹಾಗಂತ ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಳ್ಳಿ ಎಂದು ಸರ್ಕಾರ ಯಾರಿಗೂ ಒತ್ತಡ ಹೇರುವುದಿಲ್ಲ. ಹಳೇ ತೆರಿಗೆ ಪದ್ಧತಿಯಲ್ಲೇ ಮುಂದುವರಿಯುವವರು ಖಂಡಿತ ಅದನ್ನೇ ಅನುಸರಿಸಬಹುದು. ಆದರೆ ಹೊಸ ತೆರಿಗೆ ಪದ್ಧತಿ ಆಕರ್ಷಕವಾಗಿದೆ ಮತ್ತು ಸರಳವಾಗಿದೆ. ಸಣ್ಣ ಪ್ರಮಾಣದ ಸ್ಲ್ಯಾಬ್ಗಳನ್ನು ಒಳಗೊಂಡಿದ್ದು ತೆರಿಗಾದರರಿಗೆ ರಿಯಾಯಿತಿ ನೀಡುತ್ತದೆ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದರು.
ಮಹಿಳಾ ಸಬಲೀಕರಣಕ್ಕೆ ಆದ್ಯತೆ
ಈ ಸಲದ ಬಜೆಟ್ನಲ್ಲಿ ಒಟ್ಟು ನಾಲ್ಕು ಸಂಗತಿಗಳಿಗೆ ಒತ್ತುಕೊಡಲಾಗಿದೆ. ಮಹಿಳಾ ಸಬಲೀಕರಣ, ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಿಯಾ ಯೋಜನೆ, ಸಾಂಪ್ರದಾಯಿಕ ಕುಶಲಕರ್ಮಿಗಳಿಗಾಗಿ (ವಿಶ್ವಕರ್ಮ ಸಮುದಾಯದವರು) ಉಪಕ್ರಮಗಳು ಮತ್ತು ಹಸಿರು ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಗೇ, ನಾವು ಆಶಾದಾಯಕ ಫಿನ್ಟೆಕ್ ವಲಯಕ್ಕಾಗಿ ಎದುರು ನೋಡುತ್ತಿದ್ದೇವೆ. ಸದ್ಯದ 4ನೇ ಕೈಗಾರಿಕಾ ಕ್ರಾಂತಿಯ ಮೂಲಕ ಜನರನ್ನು ತರಬೇತುಗೊಳಿಸಲಾಗುವುದು. ಸಮಾಜದ ಎಲ್ಲ ವರ್ಗದ-ಕ್ಷೇತ್ರದ ಜನರಿಗೂ ಅನುಕೂಲವಾಗುವಂತೆ ಡಿಜಿಟಲ್ ಆರ್ಥಿಕತೆಯನ್ನು ಸಡಿಲಗೊಳಿಸು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದೂ ಸಚಿವೆ ತಿಳಿಸಿದರು.
ನಾವು ಮಂಡಿಸಿರುವ ಈ ಬಜೆಟ್ ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸುಧಾರಣೆಯಾಗಲು ಅನುಕೂಲ ಮಾಡಿಕೊಡುತ್ತದೆ. ದೇಶದ ಬೆಳವಣಿಗೆಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಎಂಜಿನ್ಗಳಾಗಿದ್ದರಿಂದ ಅವುಗಳಿಗೆ ಹೆಚ್ಚು ಉತ್ತೇಜನ ಕೊಡಲಾಗಿದೆ. ಅಷ್ಟೇ ಅಲ್ಲ ಖಾಸಗಿ ವಲಯವನ್ನು ಬೂಸ್ಟ್ ಮಾಡುತ್ತದೆ ಎಂದು ಹೇಳಿದರು. ಅಷ್ಟೇ ಅಲ್ಲ, ಸಿಪಿಐ (Consumer Price Index-ಗ್ರಾಹಕರ ಬೆಲೆ ಸೂಚ್ಯಂಕ) ಮತ್ತು ಡಬ್ಲ್ಯೂಪಿಐ (Wholesale Price Index-ಸಗಟು ಬೆಲೆ ಸೂಚ್ಯಂಕ) ಎರಡೂ ಕಡೆಗಳಲ್ಲಿ ಹಣದುಬ್ಬರ ಕಡಿಮೆ ಆಗಿರುವುದನ್ನು ನೀವು ನೋಡಿರಬಹುದು. ಹಣದುಬ್ಬರ ಇಳಿಕೆಗಾಗಿ ನಮ್ಮ ಸರ್ಕಾರವು ಕ್ರಮ ಕೈಗೊಂಡಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ನಾವು ಸಾಗುತ್ತಿದ್ದೇವೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಇದನ್ನೂ ಓದಿ: Union Budget 2023: ನಿರ್ಮಲಾ ಸೀತಾರಾಮನ್ ತಂಡದಲ್ಲಿ ಇರುವವರು ಇವರೇ ನೋಡಿ