Site icon Vistara News

ದೇವಸ್ಥಾನದಲ್ಲಿ ದಲಿತರೆಡೆಗೆ ಪ್ರಸಾದ ಎಸೆದು, ಜಾತಿ ನಿಂದನೆ; ಬಿದ್ದ ತಿನಿಸು ಹೆಕ್ಕಲು ಓಡಿದ ಮಕ್ಕಳು

Dalits In Madhya Pradesh

ಮಧ್ಯಪ್ರದೇಶದಲ್ಲಿ ಆದಿವಾಸಿ ಕಾರ್ಮಿಕನ ಮೇಲೆ ಮೂತ್ರವಿಸರ್ಜನೆ ಮಾಡಿದ ಪ್ರಕರಣ ಇನ್ನೂ ಹಸಿಯಾಗಿದೆ. ಅದರ ವಿವಾದದ ಬೆಂಕಿ ಆರಿಲ್ಲ. ಹೀಗಿರುವಾಗಲೇ ಇನ್ನೊಂದು ದಲಿತ ದೌರ್ಜನ್ಯದ (Harassment On Dalit) ಘಟನೆ ವರದಿಯಾಗಿದೆ. ‘ದೇವಸ್ಥಾನದಲ್ಲಿ ನಮಗೆ ಮಾತ್ರ ಪ್ರಸಾದವನ್ನು ಕೈಯಲ್ಲಿ ಕೊಡಲಿಲ್ಲ. ದೂರದಿಂದಲೇ ನಮ್ಮೆಡೆಗೆ ಎಸೆದರು’ ಎಂದು ದಲಿತ ಕುಟುಂಬ (Dalit family) ಆರೋಪ ಮಾಡಿದೆ. ಮೇಲ್ವರ್ಗದ ಇಬ್ಬರು ವ್ಯಕ್ತಿಗಳ ವಿರುದ್ಧ ಇವರು ಬೇಸರ ವ್ಯಕ್ತಪಡಿಸಿದ್ದಾರೆ.

ಸೇಮ್ರಾ ಗ್ರಾಮದ ರಾಮ ಜಾನಕಿ ದೇಗುಲದಲ್ಲಿ ಜುಲೈ 4ರಂದು ಪೂಜೆ ಮಾಡಿ, ಸಾಮೂಹಿಕ ಔತಣಕೂಟ ಏರ್ಪಡಿಸಲಾಗಿತ್ತು. ಈ ಔತಣಕ್ಕಾಗಿ ಜನಸಾಮಾನ್ಯರಿಂದಲೇ ದೇಣಿಗೆ, ಕಾಳುಕಡಿ, ಇನ್ನಿತರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ದೇಗುಲ ಕಾರ್ಯಕ್ರಮಕ್ಕೆ ದಲಿತರೂ ಸಹಕರಿಸಿದ್ದರು. ತಮ್ಮ ಕೈಲಾಗಿದ್ದನ್ನು ದೇವಸ್ಥಾನಕ್ಕೆ ಅರ್ಪಿಸಿದ್ದರು. ಹಾಗೇ, ಪೂಜೆ ದಿನ ದಲಿತ ಕುಟುಂಬದವರೂ ಕೂಡ ದೇವಸ್ಥಾನಕ್ಕೆ ಮಕ್ಕಳೊಂದಿಗೆ ಆಗಮಿಸಿದ್ದರು. ಪ್ರಸಾದವನ್ನು ಊಟ ಮಾಡಬಹುದು ಎಂದುಕೊಂಡಿದ್ದರು. ಹಾಗೇ, ಒಂದು ಕಡೆಯಲ್ಲಿ ಊಟಕ್ಕೆ ಕುಳಿತಿದ್ದರು. ಆದರೆ ಪ್ರಸಾದ ಬಡಿಸುತ್ತಿದ್ದ ಬಬ್ಲೂ ಕುಶ್ವಾಹಾ ಮತ್ತು ರಾಮ್​ ಭಜನ್ ಯಾದವ್​ ಎಂಬುವರು ಈ ದಲಿತ ಮಕ್ಕಳು, ಮಹಿಳೆಯರ ಕಡೆಗೆ ಪ್ರಸಾದ ಎಸೆದಿದ್ದಾರೆ.

ಇದನ್ನೂ ಓದಿ: MP Urinating Case: ಮೂತ್ರ ವಿಸರ್ಜನೆ ಕೇಸ್;‌ ಆದಿವಾಸಿ ವ್ಯಕ್ತಿಯ ಕಾಲು ತೊಳೆದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್;‌ ವಿಡಿಯೊ ವೈರಲ್

ಹೀಗೆ ತಮ್ಮ ಕಡೆಗೆ ಪ್ರಸಾದ ಎಸೆದಿದ್ದನ್ನು ದಲಿತರು ವಿರೋಧಿಸಿದ್ದಾರೆ. ನಮ್ಮೆಡೆಗೆ ಪ್ರಸಾದ ಎಸೆದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆಗ ಕುಶ್ವಾಹಾ ಮತ್ತು ರಾಮ್ ಭಜನ್​ ಇಬ್ಬರೂ ದಲಿತರಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಅವರಿಗೆ ಜಾತಿ ನಿಂದನೆ ಮಾಡಿದ್ದಾರೆ. ‘ನೀವು ಪ್ರಸಾದ ಸ್ವೀಕರಿಸಲು ಅರ್ಹರಲ್ಲ. ನೀವೆಲ್ಲ ಕೆಳಜಾತಿಯವರು. ಹಾಗಾಗಿಯೇ ನಾವು ನಿಮಗೆ ಪ್ರಸಾದವನ್ನು ಕೈಯಲ್ಲಿ ಕೊಡುವುದಿಲ್ಲ’ ಎಂದು ಹೇಳಿದ್ದಾರೆ. ಆಗ ಮಕ್ಕಳು ಅದನ್ನು ತೆಗೆದುಕೊಳ್ಳಲು ಓಡಿದ್ದಾರೆ. ಇದು ಗಲಾಟೆಗೂ ಕಾರಣವಾಯಿತು. ದಲಿತ ಕುಟುಂಬದವರು ತಮಗಾದ ಅವಮಾನದ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ. ಅಮದರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಇವರಿಬ್ಬರ ವಿರುದ್ಧವೂ ಕೇಸ್ ದಾಖಲಾಗಿದೆ.

Exit mobile version