ಮಾಜಿ ಕೇಂದ್ರ ಸಚಿವ, ಕಳೆದ ವರ್ಷ ಆಗಸ್ಟ್ನಲ್ಲಿ ಜನತಾ ದಳ ಯುನೈಟೆಡ್ (ಜೆಡಿಯು) ಪಕ್ಷವನ್ನು ತೊರೆದಿದ್ದ ಆರ್‌ಸಿಪಿ ಸಿಂಗ್ (RCP Singh) ಅವರು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿರುವ ಬಿಜೆಪಿ ಕಚೇರಿ (Delhi BJP Office)ಯಲ್ಲಿ ಅವರು ಇಂದು ಕಮಲ ಹಿಡಿದಿದ್ದಾರೆ. ಬಿಹಾರ್ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದ ಆರ್‌ಸಿಪಿ ಸಿಂಗ್ 2010ರಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡು ನಿತೀಶ್ ಕುಮಾರ್ ಅವರ ಜೆಡಿಯು ಸೇರ್ಪಡೆಗೊಂಡಿದ್ದರು. ಆದರೆ ಕಳೆದ ವರ್ಷ ಅವರ ಸ್ಥಿರಾಸ್ತಿ ಲೆಕ್ಕಾಚಾರದಲ್ಲಿ ವ್ಯತ್ಯಾಸ ಬಂದಿತ್ತು. ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಬೇಕಾಯ್ತು. ಹೀಗಾಗಿ ಇದಕ್ಕೆ ಸ್ಪಷ್ಟನೆ ಕೇಳಿ ಜೆಡಿಯು ಪಕ್ಷ ಆರ್‌ಸಿಪಿ ಸಿಂಗ್ ಅವರಿಗೆ ನೋಟಿಸ್ ಕೊಟ್ಟಿತ್ತು.
ಪಕ್ಷದ ಕಾರ್ಯಕರ್ತರು, ಪ್ರಮುಖರು ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ನನ್ನ ಪಕ್ಷದ ಕಾರ್ಯಕರ್ತರು ಯಾವೆಲ್ಲ ನಿವೇಶನಗಳ ವಿಚಾರದಲ್ಲಿ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೋ, ಅವಕ್ಕೆ ದಾಖಲೆ ಇವೆ. ಒಂದನ್ನು ನನ್ನ ಪುತ್ರಿ ಲಿಪಿ ಸಿಂಗ್ ಹೆಸರಲ್ಲಿ, ಇನ್ನೊಂದನ್ನು ಮತ್ತೊಬ್ಬ ಪುತ್ರಿ ಲತಾ ಸಿಂಗ್ ಹೆಸರಲ್ಲಿ ಖರೀದಿಸಿದ್ದೇನೆ. ಅವರಿಬ್ಬರೂ ಪ್ರತ್ಯೇಕವಾಗಿ 10 ವರ್ಷಗಳಿಂದ ಅವರ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ’ ಎಂದು ಹೇಳಿದ ಆರ್‌ಸಿಪಿ ಸಿಂಗ್ ಅವರು ಪಕ್ಷ ತೊರೆದಿದ್ದರು.
ನಿತೀಶ್ ಕುಮಾರ್ ಅವರ ಪ್ರಧಾನ ಕಾರ್ಯದರ್ಶಿಯಾಗಿ ಸಿಂಗ್ ಈ ಮುನ್ನ ಕೆಲಸ ಮಾಡಿದ್ದರು. ಜೆಡಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯನ್ನೂ ನಿರ್ವಹಿಸಿದ್ದರು. ರಾಜ್ಯಸಭೆಯ ಸದಸ್ಯರಾಗಿದ್ದ ಅವರನ್ನು ಕಳೆದ ವರ್ಷ ಇದ್ದಕ್ಕಿದ್ದಂತೆ ನರೇಂದ್ರ ಮೋದಿ ಅವರ ಸಂಪುಟ ಸಚಿವರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈ ನೇಮಕಾತಿ ಪಕ್ಷದ ಮುಖ್ಯಸ್ಥ ನಿತೀಶ್ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಇನ್ನೊಂದು ಅವಧಿಗೆ ರಾಜ್ಯಸಭೆಯ ಸದಸ್ಯತ್ವವನ್ನು ಜೆಡಿಯು ಪಕ್ಷ ಆರ್‌ಸಿಪಿ ಸಿಂಗ್ ಅವರಿಗೆ ನೀಡಿರಲಿಲ್ಲ. ಇದರಿಂದಾಗಿ ಸಿಂಗ್ ತಮ್ಮ ಸಚಿವ ಸ್ಥಾನ ಕಳೆದುಕೊಳ್ಳಬೇಕಾಗಿ ಬಂದಿತ್ತು. ಅದರ ಬೆನ್ನಲ್ಲೇ ಭ್ರಷ್ಟಾಚಾರದ ಆರೋಪ ಮಾಡಲಾಗಿತ್ತು.