ನವ ದೆಹಲಿ: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಡಾ. ದೇವಿಸಿಂಗ್ ರಾಂಸಿಂಗ್ ಶೇಖಾವತ್ ತಮ್ಮ 89ನೇ ವಯಸ್ಸಿನಲ್ಲಿ ನಿಧನ (Devisingh Shekhawat Dies)ರಾಗಿದ್ದಾರೆ. ಹೃದಯ ಸಂಬಂಧಿ ತೊಂದರೆಯ ಕಾರಣಕ್ಕೆ ಕಳೆದ ಎರಡು ದಿನಗಳ ಹಿಂದೆ ಪುಣೆಯ ಕೆಇಎಂ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತ್ನಿ ಪ್ರತಿಭಾ ಪಾಟೀಲ್, ಪುತ್ರ ರಾಜೇಂದ್ರ ಸಿಂಗ್ ಶೇಖಾವತ್ (ಕಾಂಗ್ರೆಸ್ ನಾಯಕ) ಮತ್ತು ಪುತ್ರಿ ಜ್ಯೋತಿ ರಾಥೋಡ್ರನ್ನು ಅಗಲಿದ್ದಾರೆ. ಇಂದು ಸಂಜೆ 7ಗಂಟೆಗೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪುಣೆಯ ಕೆಇಎಂ ಆಸ್ಪತ್ರೆ, ‘ದೇವಿಸಿಂಗ್ ಶೇಖಾವತ್ ಅವರು ಇತ್ತೀಚೆಗೆ ಬಿದ್ದು, ಫ್ರ್ಯಾಕ್ಚರ್ ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಲ್ಲಿ ಹೃದಯ ಸಂಬಂಧಿ ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡು, ತಪಾಸಣೆ ಮಾಡಿದಾಗ ಎದೆಯಲ್ಲಿ ಸೋಂಕು ಉಂಟಾಗಿರುವುದು ಪತ್ತೆಯಾಯಿತು. ಬರುಬರುತ್ತ ಕಿಡ್ನಿ ಕಾರ್ಯವೂ ಸ್ಥಗಿತವಾಯಿತು. ಇಂದು (ಫೆ.24) ಬೆಳಗ್ಗೆ 9.30ರ ಹೊತ್ತಿಗೆ ಸಾವನ್ನಪ್ಪಿದ್ದಾರೆ’ ಎಂದು ತಿಳಿಸಿದೆ.
ಇದನ್ನೂ ಓದಿ: ಮಹಾರಾಣಿಯ ನೋಟಕ್ಕಾಗಿ ಕಾತರಿಸುತ್ತಿದ್ದ ಜನ | ಭಾರತಕ್ಕೆ 3 ಬಾರಿ ಭೇಟಿ
ದೇವಿಸಿಂಗ್ ಅವರು ಮೂಲತಃ ಕೃಷಿಕರಾಗಿದ್ದರು. ರಸಾಯನಶಾಸ್ತ್ರ ಪ್ರಾಧ್ಯಾಪಕರೂ ಆಗಿದ್ದರು. ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದ ಅವರು, ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. 1980ರಿಂದ 1990ರವರೆಗೆ ಮಹಾರಾಷ್ಟ್ರದ ಅಮರಾವತಿಯ ಶಾಸಕರಾಗಿದ್ದರು. 1965ರ ಜುಲೈ 7ರಂದು ಪ್ರತಿಭಾ ಪಾಟೀಲ್ ಅವರನ್ನು ವಿವಾಹವಾಗಿದ್ದರು. 1972ರಲ್ಲಿ ಅವರಿಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪ್ರದಾನ ಮಾಡಲಾಯಿತು. ಬಳಿಕ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. 1991-1992ರವರೆಗೆ ಅಮರಾವತಿ ಮೇಯರ್ ಕೂಡ ಆಗಿದ್ದರು.
ಇನ್ನು ಶೇಖಾವತ್ ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇತ್ತು. 1995ರಲ್ಲಿ ಅವರು ‘ಸಾಧನಾ ಕೃಷಿ ವಿಜ್ಞಾನ ಕೇಂದ್ರ’ ಎಂಬ ಕೃಷಿ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದರು. ಶಿಕ್ಷಣ ಕ್ಷೇತ್ರದಲ್ಲೂ ಅಪಾರ ಸಾಧನೆ ಮಾಡಿದ್ದರು. ಅಮರಾವತಿ ವಿಶ್ವ ವಿದ್ಯಾಲಯದ ಉಪಕುಲಪತಿಯಾಗಿ ನೇಮಕಗೊಂಡರು. ದೇವಿಸಿಂಗ್ ಶೇಖಾವತ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಎನ್ಸಿಪಿ ನಾಯಕ ಶರದ್ ಪವಾರ್ ಸೇರಿ ಹಲವು ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.