ನವ ದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ, ದೇಶದಲ್ಲಿ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯಿಂದ ಸಂರಕ್ಷಿಸಲ್ಪಟ್ಟಿರುವ ಎಲ್ಲ ಸ್ಮಾರಕಗಳಿಗೂ ಆಗಸ್ಟ್ 5ರಿಂದ 15ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ದೇಶದ ಯಾವುದೇ ಸ್ಮಾರಕಗಳಿಗೆ ಮತ್ತು ಪ್ರಸಿದ್ಧ ತಾಣಗಳಿಗೆ ಭೇಟಿ ಕೊಡುವ ಪ್ರವಾಸಿಗರು ಪ್ರವೇಶ ಶುಲ್ಕ ನೀಡುವ ಅಗತ್ಯ ಇರುವುದಿಲ್ಲ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಂದರೆ ತಾಜ್ಮಹಲ್, ಕೆಂಪು ಕೋಟೆ ಸೇರಿ ಇಂಥ ಎಲ್ಲ ಸ್ಮಾರಕಗಳಿಗೂ ಪ್ರವೇಶ ಉಚಿತ ಇರಲಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷವಾದ ಹಿನ್ನೆಲೆಯಲ್ಲಿ ಈ ಆಜಾದಿ ಕಾ ಅಮೃತ ಮಹೋತ್ಸವ ಪ್ರಾರಂಭವಾಗಿದೆ. ಈ ಅಭಿಯಾನವನ್ನು ಮತ್ತು ಸ್ವಾತಂತ್ರ್ಯ ಪಾದಯಾತ್ರೆ (Freedom March)ಗೆ 2021ರ ಮಾರ್ಚ್12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದರು. ಈ ಆಜಾದಿ ಕಾ ಅಮೃತ ಮಹೋತ್ಸವ 2023ರ ಆಗಸ್ಟ್ 15ರವರೆಗೂ ಮುಂದುವರಿಯಲಿದೆ. ಹಾಗೇ, ಈ ಉಪಕ್ರಮದಡಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳು, ಅಭಿವೃದ್ಧಿ ಕೆಲಸಗಳನ್ನು ಆಯೋಜಿಸುತ್ತಿದೆ.
ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆಗಸ್ಟ್ 2ರಿಂದ ಆಗಸ್ಟ್ 15ರವರೆಗೆ ದೇಶದ ಜನರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ಗಳ ಪ್ರೊಫೈಲ್ನಲ್ಲಿ ರಾಷ್ಟ್ರಧ್ವಜದ ಫೋಟೋ ಹಾಕಿಕೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಸ್ವತಃ ಅವರೂ ತಮ್ಮ ಪ್ರೊಫೈಲ್ಗೆ ತ್ರಿವರ್ಣ ಧ್ವಜದ ಫೋಟೋ ಹಾಕಿಕೊಂಡಿದ್ದಾರೆ. ಅಲ್ಲದೆ, ಆಗಸ್ಟ್ 13-15ರವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಸೋಣ. ಅದರ ಭಾಗವಾಗಿ ದೇಶದ ಪ್ರತಿ ಮನೆಯ ಮೇಲೆಯೂ ತ್ರಿವರ್ಣ ಧ್ವಜ ಹಾರಿಸೋಣ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Har Ghar Tiranga | ಪ್ರಧಾನಿ ಮೋದಿ ಕರೆಕೊಟ್ಟ ಹರ್ ಘರ್ ತಿರಂಗಾಕ್ಕೆ ಭರ್ಜರಿ ಟ್ವಿಸ್ಟ್ ಕೊಟ್ಟ ಕಾಂಗ್ರೆಸ್