ನವ ದೆಹಲಿ: 2012ರಲ್ಲಿ ರಚನೆಯಾಗಿ ಪ್ರಾದೇಶಿಕ ಪಕ್ಷವಾಗಿಯೇ ಮುನ್ನಡೆಯುತ್ತ ಬಂದಿದ್ದ ಆಮ್ ಆದ್ಮಿ ಪಕ್ಷ 2017ರಿಂದ ಈಚೆಗೆ ದೇಶದ ಎಲ್ಲ ರಾಜ್ಯಗಳಿಗೂ ನಿಧಾನವಾಗಿ ತನ್ನ ಬಾಹುವನ್ನು ಚಾಚುತ್ತಿದೆ. ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಾರಂಭ ಮಾಡಿತು. ಆರಂಭದಲ್ಲಿ ಆ ಪಕ್ಷ ಚುನಾವಣೆಗಳಲ್ಲಿ ಒಂದೂ ಸ್ಥಾನ ಗೆಲ್ಲುತ್ತಿರಲಿಲ್ಲ. ‘ಇತರ’ ಎಂಬ ಕಾಲಂನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಬರುಬರುತ್ತ ಆಪ್ ಪ್ರಬಲವಾಗುತ್ತಿದೆ. ದೆಹಲಿ ಹೊರತು ಪಡಿಸಿದ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಇಳಿಯುತ್ತಿದೆ.
2022ರ ಫೆಬ್ರವರಿಯಲ್ಲಿ ಪಂಜಾಬ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ನ್ನು ಸೋಲಿಸಿದ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚನೆ ಮಾಡಿದೆ. ದೆಹಲಿ ಹೊರತು ಪಡಿಸಿ ಅದು ಗೆದ್ದ ಮೊದಲ ರಾಜ್ಯ ಪಂಜಾಬ್ ಆಗಿತ್ತು. ಪಂಜಾಬ್ ಗೆದ್ದ ಬೆನ್ನಲ್ಲೇ, ‘ನಾವು ಮುಂಬರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗಳಲ್ಲೂ ಸ್ಪರ್ಧಿಸುತ್ತೇವೆ’ ಎಂದು ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ಅದರಂತೆ ಸ್ಪರ್ಧಿಸಿ ಈಗ ಹಿಮಾಚಲ ಪ್ರದೇಶದಲ್ಲಿ ಒಂದೂ ಸ್ಥಾನ ಗೆಲ್ಲಲಿಲ್ಲ. ಗುಜರಾತ್ನಲ್ಲಿ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
2013ರಲ್ಲಿ ಮೊಟ್ಟಮೊದಲು ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆ ಎದುರಿಸಿ, ಗೆದ್ದಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಟದ ಹೆಸರಲ್ಲಿ. ಆದರೆ ನಂತರ ದೆಹಲಿಯಲ್ಲಿ ‘ಉಚಿತ’ ಭರವಸೆಗಳ ಮೂಲಕವೇ ಗೆದ್ದಿದೆ. ಉಚಿತ ಶಿಕ್ಷಣ, ಉಚಿತ ನೀರು, ಉಚಿತ ವಿದ್ಯುತ್ಗಳೇ ಆಪ್ ಅಸ್ತ್ರಗಳು. ದೆಹಲಿಯಲ್ಲಿ ಈಗಲೂ ದಿನಕ್ಕೆ 20 ಸಾವಿರ ಲೀಟರ್ ನೀರು ಉಚಿತ. 300 ಯುನಿಟ್ ವಿದ್ಯುತ್ ಉಚಿತ.
ಇನ್ನೊಂದು ಪ್ರಮುಖ ಕಾರಣ ಎಂದರೆ ಅವರು ದೆಹಲಿ ಶಿಕ್ಷಣ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಿದ್ದು. ಸರ್ಕಾರಿ ಶಾಲೆಗಳನ್ನೂ, ಯಾವ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದಂತೆ ಪರಿವರ್ತಿಸಿದ್ದಾರೆ. ಹಾಗೇ, ಪ್ರತಿವರ್ಷ ಬಜೆಟ್ನಲ್ಲಿ ಶೇ.25ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೇ ಮೀಸಲಿಡುತ್ತಿದ್ದಾರೆ. ಹಾಗೇ, ಮೊಹಲ್ಲಾ ಚಿಕಿತ್ಸಾಲಯಗಳನ್ನು ಸ್ಥಾಪಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲೂ ಸುಧಾರಣೆ ಮಾಡಿದ್ದಾರೆ. ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3000 ರೂ. ಭತ್ಯೆ, ಸರ್ಕಾರಿ ಉದ್ಯೋಗ ಸೃಷ್ಟಿಗಳನ್ನೆಲ್ಲ ಅವರು ತುಂಬ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಜನರಿಗೆ ಅತ್ಯಗತ್ಯವಿರುವ ನೀರು-ವಿದ್ಯುತ್-ಶಿಕ್ಷಣ-ಆರೋಗ್ಯ-ಉದ್ಯೋಗಗಳನ್ನೇ ಅವರು ತಮ್ಮ ಚುನಾವಣಾ ಪ್ರಣಾಳಿಕಾ ಅಸ್ತ್ರವನ್ನಾಗಿ ಬಳಸಿಕೊಂಡು ದೆಹಲಿಯನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ.
ಪಂಜಾಬ್ನಲ್ಲೂ ಇದೇ ಕಮಾಲ್
ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ನಲ್ಲಿಯೂ ಇದೇ ಪ್ರಣಾಳಿಕೆಗಳನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡಿದ್ದರು. ದೆಹಲಿ ಮಾದರಿಯ ಆಡಳಿತವನ್ನೇ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಹಲವು ಅವ್ಯವಸ್ಥೆಗಳ ಗೂಡಾಗಿದ್ದ ಪಂಜಾಬ್ನಲ್ಲಿ ಕೇಜ್ರಿವಾಲ್ ಅವರ ಪ್ರಣಾಳಿಕೆಗಳು ಕೆಲಸ ಮಾಡಿವೆ ಎಂದಿಟ್ಟುಕೊಳ್ಳೋಣ. ಅಲ್ಲಿ ಆಪ್ ಗೆಲ್ಲಲು ಹಲವು ಕಾರಣಗಳ ಮಧ್ಯೆ ಈ ಉಚಿತ ಸೌಕರ್ಯಗಳೂ ಕಾರಣ ಹೌದು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಗುಜರಾತ್-ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡಲಿಲ್ಲ ‘ಉಚಿತ’
ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸುವಾಗಲೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇದೇ ಉಚಿತಗಳ ಅಸ್ತ್ರವನ್ನೇ ಪ್ರಯೋಗ ಮಾಡಿದ್ದರು. ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ಉಚಿತ ವಿದ್ಯುತ್-ನೀರು, ನಿರುದ್ಯೋಗಿ ಯುವಕರಿಗೆ ಭತ್ಯೆ ಸೇರಿ ಹಲವು ಭರವಸೆಗಳನ್ನು ಪ್ರಣಾಳಿಕೆ ರೂಪದಲ್ಲಿ ನೀಡಿದ್ದರು. ಥೇಟ್ ದೆಹಲಿ ಮಾದರಿ ಆಡಳಿತ ನೀಡುವುದಾಗಿ ಹೇಳಿದ್ದರು.
ಆದರೆ ಈ ಎರಡೂ ರಾಜ್ಯಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಉಚಿತ ಸೌಕರ್ಯಕ್ಕೆ ಜನರು ಮರುಳಾಗಲಿಲ್ಲ. ಆಪ್ನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ‘ಆಪ್ ಕೊಡುವ ಉಚಿತ ಸೌಕರ್ಯಗಳಿಗಿಂತಲೂ ನಮಗೆ ಪ್ರಧಾನಿ ನರೇಂದ್ರ ಮೋದಿ ನಮ್ಮ ರಾಜ್ಯದವರು ಎಂಬ ಅಭಿಮಾನವೇ ದೊಡ್ಡದು’ ಎಂದು ಗುಜರಾತ್ ಜನರು ಸ್ಪಷ್ಟಪಡಿಸಿದ್ದಾರೆ. ಹಾಗೇ, ಹಿಮಾಚಲ ಪ್ರದೇಶದ ಜನರು ಕಾಂಗ್ರೆಸ್ಗೆ ಅವಕಾಶ ಕೊಟ್ಟಿದ್ದಾರೆ. ‘ಉಚಿತ’ ಭರವಸೆಗಳ ಪ್ರಣಾಳಿಕೆಯೇ ಒಂದು ಪಕ್ಷವನ್ನು ಗೆಲ್ಲಿಸಲಾರದು ಎಂಬುದಕ್ಕೆ ಇದೆರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ.
ಇದನ್ನೂ ಓದಿ: Himachal Election Result | ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಮತ ಗಳಿಕೆಯ ಅಂತರ 1%ಕ್ಕಿಂತಲೂ ಕಡಿಮೆ!