Site icon Vistara News

ನಿಯಂತ್ರಣಕ್ಕೆ ಬಾರದ ಮಣಿಪುರ ಹಿಂಸಾಚಾರ; ಮತ್ತೆ ಫೈರಿಂಗ್​, 24 ಗಂಟೆಯಲ್ಲಿ 9 ಜನರ ಸಾವು

Fresh Violence in Manipur

#image_title

ಮಣಿಪುರದಲ್ಲಿ ಹಿಂಸಾಚಾರ (Manipur violence) ನಿಯಂತ್ರಣಕ್ಕೆ ಬರುವ ಲಕ್ಷಣವೇ ಕಾಣಿಸುತ್ತಿಲ್ಲ. ಸ್ವಲ್ಪ ತಣ್ಣಗಾಗಿದ್ದ ಸಂಘರ್ಷ ಇದೀಗ ಮತ್ತೆ ಹೊಸದಾಗಿ ಹೊತ್ತಿ ಉರಿಯುತ್ತಿದೆ. ಕಳೆದ 24ಗಂಟೆಯಲ್ಲಿ ಈ ಗಲಭೆ-ಹಿಂಸಾಚಾರಕ್ಕೆ 9 ಮಂದಿ ಬಲಿಯಾಗಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ ಖಾಮೇನ್​ಲೋಕ್​ ಏರಿಯಾದಲ್ಲಿ ಗುಂಡಿನ ಸದ್ದು ಮೊಳಗಿದೆ. ಗಲಭೆಕೋರರು ಫೈರಿಂಗ್ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಸಿಕ್ಕಸಿಕ್ಕವರನ್ನು ಇರಿದಿದ್ದಾರೆ. ಗಾಯಗೊಂಡವರನ್ನು ಇಂಫಾಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರ/ಮೃತಪಟ್ಟವರ ಮೈಮೇಲೆ ಕತ್ತರಿಸಿದ ಗುರುತುಗಳು, ಬುಲೆಟ್​ನಿಂದಾದ ಗಾಯಗಳು ತುಂಬಿ ಹೋಗಿವೆ ಎಂದು ವರದಿಯಾಗಿದೆ.

ಮಣಿಪುರದ ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್​ಟಿ) ಸ್ಥಾನಮಾನ ಕೊಡುವುದಕ್ಕೆ ಸಂಬಂಧಪಟ್ಟು ಈ ಗಲಾಟೆ ನಡೆಯುತ್ತಿದೆ. ಮೈತೈಗಳು ತಮಗೆ ಪರಿಶಿಷ್ಟ ಪಂಗಡ ಸ್ಥಾನಮಾನ ಬೇಕು ಎಂದು ಆಗ್ರಹಿಸುತ್ತಿದ್ದರೆ, ಕುಕಿ ಸಮುದಾಯದವರು ಇದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಮೈತೈಗಳಿಗೆ ಎಸ್​ಟಿ ಸ್ಥಾನಮಾನ/ಸೌಕರ್ಯ ಕೊಡಲೇಬಾರದು ಎಂದು ಪಟ್ಟು ಹಿಡಿದಿದ್ದಾರೆ. ಇವರಿಬ್ಬರ ನಡುವಿನ ಗಲಾಟೆ ತಾರಕಕ್ಕೇರಿ, ಹಿಂಸಾಚಾರ ಸ್ವರೂಪ ತಳೆದಿದೆ. ಅಲ್ಲಿ ಜನರ ಜೀವ ಹೋಗುತ್ತಿದೆ. ಆಸ್ಪತ್ರೆ, ಸಾರ್ವಜನಿಕ/ಖಾಸಗಿ ಆಸ್ತಿಪಾಸ್ತಿಗಳು ಸರ್ವನಾಶವಾಗುತ್ತಿವೆ. ಧಾರ್ಮಿಕ ಪ್ರದೇಶಗಳೂ ಸುಟ್ಟು ಬೂದಿಯಾಗುತ್ತಿವೆ. ಗೃಹ ಸಚಿವ ಅಮಿತ್ ಶಾ ಅವರು ಕೂಡ ಮಣಿಪುರ ಪರಿಸ್ಥಿತಿ ಅವಲೋಕಿಸಿ, ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಗೆ ತನಿಖೆಯನ್ನು ವಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಗಲಭೆಕೋರರಿಗೆ ಈಗಾಗಲೇ ಖಡಕ್​ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಆದರೆ ಒಂದಲ್ಲ ಒಂದು ಸ್ಥಳದಲ್ಲಿ ಹಿಂಸಾಚಾರ ಭುಗಿಲೇಳುತ್ತಲೇ ಇದೆ.

ಇದನ್ನೂ ಓದಿ: Manipur Violence: ಮಣಿಪುರದಲ್ಲಿ 40 ಕುಕಿ ಬಂಡುಕೋರರ ಹತ್ಯೆ; ಸಿಎಂ ಬಿರೇನ್‌ ಸಿಂಗ್‌ ಮಾಹಿತಿ

ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಪ್ರಯತ್ನಗಳನ್ನು ಜಾರಿಯಲ್ಲಿಟ್ಟಿವೆ. ರಾಜ್ಯ ಪೊಲೀಸರು, ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿ, ಅರೆಸೇನಾ ಪಡೆಗಳು ಬೀಡುಬಿಟ್ಟಿವೆ. ಇಂಫಾಲ್ ಸೇರಿ ಹಲವು ಕಡೆಗೆ ಸೆಕ್ಷನ್​ 144 (ನಿಷೇಧಾಜ್ಞೆ) ಜಾರಿಯಲ್ಲಿವೆ. ಗೃಹ ಸಚಿವ ಅಮಿತ್ ಶಾ ಭೇಟಿ ಕೊಟ್ಟ ಬಳಿಕ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಸುಧಾರಿಸಿತ್ತು. ಕೆಲವು ಕಡೆಗಳಲ್ಲಿ ಸೆಕ್ಷನ್​ 144ನ್ನು ತೆಗೆದುಹಾಕಲಾಗಿತ್ತು. ಆದರೆ ಮತ್ತೀಗ ಮಿತಿಮೀರಿದ ಬೆನ್ನಲ್ಲೇ ನಿಷೇಧಾಜ್ಞೆ ಹೊಸದಾಗಿ ಜಾರಿಗೊಳಿಸಲಾಗಿದೆ. ಇದುವರೆಗಿನ ಸಂಘರ್ಷದಲ್ಲಿ, ಮಣಿಪುರದಲ್ಲಿ 100ಕ್ಕೂ ಹೆಚ್ಚು ಜನರ ಜೀವ ಹೋಗಿದೆ.

ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಸುಟ್ಟು ಬೂದಿಯಾಗುತ್ತಿರುವ ಶಾಲೆಗಳು, ಚರ್ಚ್​​ಗಳು; ಐಟಿ ಅಧಿಕಾರಿಯ ಹತ್ಯೆ

Exit mobile version