ನವ ದೆಹಲಿ: ‘ನನ್ನ ಸ್ನೇಹಿತ ಸ್ವಿಜರ್ಲ್ಯಾಂಡ್ಗೆ ಹೋಗುತ್ತಿದ್ದಾನೆ. ದಯವಿಟ್ಟು ಆತ ಅಲ್ಲಿಗೆ ಹೋಗದಂತೆ ತಡೆಯಿರಿ’ ಎಂದು ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಆತನ ವಲಸೆಗೆ ಅನುಮತಿ ನೀಡದಂತೆ ನೀವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಈ 49 ವರ್ಷದ ಮಹಿಳೆ ತಮ್ಮ ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ. ಹೀಗೆ ತನ್ನ ಗೆಳೆಯ ಸ್ವಿಜರ್ಲ್ಯಾಂಡ್ಗೆ ಹೋಗುವುದನ್ನು ತಡೆಯಲು ಮಹಿಳೆ ಇನ್ನಿಲ್ಲದಂತೆ ಪ್ರಯತ್ನ ಮಾಡುತ್ತಿರುವುದರ ಹಿಂದೆ ಸದುದ್ದೇಶವಿದೆ. ತನ್ನ ಗೆಳೆಯ ಈಗ ಅಲ್ಲಿಗೆ ಹೋಗಿಬಿಟ್ಟರೆ, ಆತ ಭೂಮಿ ಮೇಲೆ ಇರುವುದೇ ಇಲ್ಲವೆಂಬ ಭಯದಿಂದಲೇ ಆಕೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮಹಿಳೆಯ ಸ್ನೇಹಿತ ದೀರ್ಘಕಾಲದಿಂದಲೂ ಒಂದು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ಇನ್ನೂ 40 ವರ್ಷದ ಆಸುಪಾಸು. ಮೈಯಾಲ್ಜಿಕ್ ಎನ್ಸೆಫಲೋಮೈಲಿಟಿಸ್ ಎಂಬ ರೋಗದಿಂದ ಪೂರ್ತಿಯಾಗಿ ಬಳಲಿಹೋಗಿದ್ದಾನೆ. ದಯಾಮರಣಕ್ಕಾಗಿ ಪ್ರಯತ್ನಿಸುತ್ತಿರುವ ಆತ, ಭಾರತದಲ್ಲಿ ಅದಕ್ಕೆ ಅವಕಾಶ ಇಲ್ಲ ಎಂಬ ಕಾರಣಕ್ಕೆ ಸ್ವಿಜರ್ಲ್ಯಾಂಡ್ಗೆ ಹೋಗಿ ಅಲ್ಲಿನ ವೈದ್ಯರಿಂದ ದಯಾಮರಣ ಪಡೆಯುವ ಇಚ್ಛೆ ಆತನದ್ದು. ಆದರೆ ಮಹಿಳೆಗೆ ಅದು ಸುತಾರಾಂ ಇಷ್ಟವಿಲ್ಲ. ತನ್ನ ಸ್ನೇಹಿತನನ್ನು ಉಳಿಸಿಕೊಳ್ಳುವ ಸಲುವಾಗಿ, ಅವರೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮೈಯಾಲ್ಜಿಕ್ ಎನ್ಸೆಫಲೋಮೈಲಿಟಿಸ್ ಎಂಬುದು ಉರಿಯೂತದ ಕಾಯಿಲೆಯಾಗಿದ್ದು, ಒಮ್ಮೆ ಬಂದರೆ ಹೋಗುವಂಥದ್ದಲ್ಲ. ದೇಹವನ್ನು ದುರ್ಬಲಗೊಳಿಸುತ್ತದೆ. ವಿವಿಧ ಅಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಅರ್ಜಿದಾರ ಮಹಿಳೆಯ ಸ್ನೇಹಿತನಿಗೆ ಮೊದಲು ಈ ಕಾಯಿಲೆಯ ಲಕ್ಷಣ ಕಾಣಿಸಿಕೊಂಡಿದ್ದು, 2014ರಲ್ಲಿ. ಈಗಂತೂ ಸಂಪೂರ್ಣವಾಗಿ ಹಾಸಿಗೆ ಹಿಡಿದ ಪರಿಸ್ಥಿತಿ ತಲುಪಿದ್ದಾರೆ. ಎದ್ದು ಮನೆಯೊಳಗೇ ಸ್ವಲ್ಪ ದೂರ ನಡೆಯುವಷ್ಟರಲ್ಲೇ ತುಂಬ ಸುಸ್ತಾಗಿ ಬೀಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೇ, ‘ನನ್ನ ಸ್ನೇಹಿತ ಮೊದಲು ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಕೊವಿಡ್ 19 ಸೋಂಕು ಬಂದ ಮೇಲೆ ಅದಕ್ಕೂ ತೊಡಕಾಯಿತು. ಕೆಲವು ಅಂಗಾಂಗಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರೆ ದಾನಿಗಳು ಸಿಗುತ್ತಿಲ್ಲ. ನನ್ನ ಸ್ನೇಹಿತನಿಗೆ ದೇಶದಲ್ಲೇ ಆಗಲಿ, ವಿದೇಶದಲ್ಲಾಗಲಿ ಚಿಕಿತ್ಸೆ ಕೊಡಿಸಲು ಹಣಕಾಸಿನ ತೊಂದರೆ ಏನೂ ಇಲ್ಲ. ಆದರೆ ದಯಾಮರಣ ಪಡೆಯಬೇಕು ಎಂಬ ನಿರ್ಧಾರವನ್ನು ಆತ ಸಡಿಲಿಸುತ್ತಿಲ್ಲ. ಇದರಿಂದಾಗಿ ಆತನ ವಯಸ್ಸಾದ ತಂದೆ-ತಾಯಿ ಪರಿತಪಿಸುತ್ತಿದ್ದಾರೆ. ಮಗನನ್ನು ಸ್ವಿಜರ್ಲ್ಯಾಂಡ್ಗೆ ಕಳಿಸಿಕೊಡಲು ಅವರಿಗೆ ಸ್ವಲ್ಪವೂ ಇಷ್ಟವಿಲ್ಲ’ ಎಂಬುದನ್ನೂ ಮಹಿಳೆ ಹೇಳಿದ್ದಾರೆ.
‘ಕಾಯಿಲೆಯಿಂದ ಬಳಲುತ್ತಿರುವ ನನ್ನ ಸ್ನೇಹಿತ, ಹೇಗಾದರೂ ಸ್ವಿಜರ್ಲ್ಯಾಂಡ್ಗೆ ಹೋಗಬೇಕು ಎಂಬ ಕಾರಣಕ್ಕೆ ವೀಸಾಕ್ಕೆ ಅಪ್ಲೈ ಮಾಡುವಾಗ, ಚಿಕಿತ್ಸೆಗೆ ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ವಾಸ್ತವ ಹಾಗಿಲ್ಲ. ಆತನ ವೀಸಾ ಪರಿಶೀಲನೆಗಾಗಿ ಕೆಂದ್ರ ಸರ್ಕಾರ ಒಂದು ವೈದ್ಯಕೀಯ ಮಂಡಳಿಯನ್ನು ರಚಿಸಬೇಕು. ಆತನ ಆರೋಗ್ಯವನ್ನು ತಪಾಸಣೆ ಮಾಡಬೇಕು. ಹಾಗೇ, ಅವನಿಗೆ ಅಗತ್ಯವಿರುವ ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕು’ ಎಂದು ಮಹಿಳೆ ಹೇಳಿದ್ದಾರೆ. ಹಾಗೊಮ್ಮೆ, ನನ್ನ ಸ್ನೇಹಿತ ಸ್ವಿಜರ್ಲ್ಯಾಂಡ್ಗೆ ಹೋಗಿ, ದಯಾಮರಣಕ್ಕೆ ಒಳಗಾದರೆ, ಇಲ್ಲಿ ಅವನ ಪಾಲಕರಿಗೆ ತುಂಬಲಾರದ ನಷ್ಟವಾಗುತ್ತದೆ. ನಾವೆಲ್ಲರೂ ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ʼಅಂಥವರಿಗೆ ವಿಮಾನ ಹತ್ತಲು ಬಿಡಲೇಬೇಡಿʼ: ಡಿಜಿಸಿಎಗೆ ದೆಹಲಿ ಹೈಕೋರ್ಟ್‌ನಿಂದ ಮಹತ್ವದ ಆದೇಶ