ನವದೆಹಲಿ: ದುಬೈಗೆ ಹೊರಟಿದ್ದ ಫೆಡ್‌ಎಕ್ಸ್ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿಯಾಗಿದ್ದು, ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಹಾಗೆಯೇ, ವಿಮಾನ ನಿಲ್ದಾಣದಲ್ಲಿ (Delhi Airport) ಸಂಪೂರ್ಣವಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವಿಮಾಣ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದರು.
“ಫೆಡ್‌ಎಕ್ಸ್ ವಿಮಾನವು ದೆಹಲಿಯಿಂದ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಹಕ್ಕಿ ಡಿಕ್ಕಿಯಾಗಿದೆ. ಸುಮಾರು ಸಾವಿರ ಅಡಿ ಎತ್ತರದಲ್ಲಿ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದೆ. ಕೂಡಲೇ ವಿಮಾನದ ಅಧಿಕಾರಿಗಳು ಎಚ್ಚೆತ್ತುಕೊಂಡು ತುರ್ತು ಪರಿಸ್ಥಿತಿ ಘೋಷಿಸಿದರು. ಇದಾದ ಬಳಿಕ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ” ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಸ್ಪಷ್ಟಪಡಿಸಿದೆ.
“ಬೋಯಿಂಗ್ 777-200 ಎಲ್‌ಆರ್ ವಿಮಾನದ ತಾಂತ್ರಿಕ ತಪಾಸಣೆ ಎಲ್ಲ ಮುಗಿದ ಬಳಿಕವೇ ಶನಿವಾರ ಮಧ್ಯಾಹ್ನ ಸುಮಾರು 1.39ರ ಸುಮಾರಿಗೆ ಟೇಕ್ ಆಫ್ ಆಯಿತು. ಆದರೆ, ಹಕ್ಕಿ ಡಿಕ್ಕಿಯಾಗುತ್ತಲೇ ಸಮಸ್ಯೆ ಎದುರಾಯಿತು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಲು ಎಲ್ಲ ಕ್ರಮ ತೆಗೆದುಕೊಳ್ಳಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಲ್ಯಾಂಡ್ ಆದ ಬಳಿಕ ಮತ್ತೆ ತಾಂತ್ರಿಕ ತಪಾಸಣೆ ನಡೆಸಿ, ಟೇಕ್ ಆಫ್ ಮಾಡಲಾಯಿತು” ಎಂದು ಹೇಳಿದೆ.
ವಿಮಾನಗಳಿಗೆ ಹಕ್ಕಿ ಡಿಕ್ಕಿಯಾಗುವುದು ಸಾಮಾನ್ಯವಾಗಿದೆ. ಕೆಲ ತಿಂಗಳ ಹಿಂದಷ್ಟೇ ದೆಹಲಿ ಮೂಲದ ಆಕಾಸ ಏರ್ ಸಂಸ್ಥೆಯ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿತ್ತು. ಇದರಿಂದಾಗಿ ವಿಮಾನದ ರೇಡೋಮ್ (ವಿಮಾನದ ರಾಡಾರ್ ಉಪಕರಣವನ್ನು ಕೆಟ್ಟ ವಾತಾವರಣದಿಂದ ಕಾಪಾಡುವ ರೇಡಿಯೊ ಗುಮ್ಮಟ)ಗೆ ಹಾನಿಯಾಗಿತ್ತು. ಅದರ ಮೇಲೆ ರಕ್ತದ ಕಲೆ ಕಾಣಿಸುತ್ತಿದ್ದು, ಹಕ್ಕಿ ಮೃತಪಟ್ಟಿದ್ದು ಖಚಿತವಾಗಿತ್ತು.
ಆಕಾಸ ಏರ್ನ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಅಹ್ಮದಾಬಾದ್ನಿಂದ ಟೇಕ್‌ಆಫ್ ಆಗಿ ದೆಹಲಿಗೆ ಹೋಗುತ್ತಿತ್ತು. ಹಂತಹಂತವಾಗಿ ಮೇಲಕ್ಕೇರುತ್ತಿತ್ತು. ಹೀಗೆ ಸುಮಾರು 1900 ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿದ್ದಾಗ ಅದ್ಯಾವುದೋ ದೊಡ್ಡ ಹಕ್ಕಿ ಡಿಕ್ಕಿ ಹೊಡೆದಿದೆ. ಈ ವಿಷಯವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ವೂ ದೃಢಪಡಿಸಿತ್ತು. ಹಾಗೆಯೇ ಮತ್ತೇನೂ ಗಂಭೀರ ಹಾನಿಯಾಗಿಲ್ಲ. ಪ್ರಯಾಣಿಕರೂ ಸಮಸ್ಯೆ ಆಗಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: Akasa Air | ಆಕಾಸ ಏರ್ ವಿಮಾನಕ್ಕೆ 1900 ಅಡಿ ಎತ್ತರದಲ್ಲಿ ಹಕ್ಕಿ ಡಿಕ್ಕಿ; ರೇಡೋಮ್ ಮೇಲೆ ರಕ್ತದ ಕಲೆ