ಮುಂಬಯಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನ (Congress President)ಕ್ಕೆ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಚುನಾವಣೆ ಬಗ್ಗೆ ಪಕ್ಷದ ಜಿ 23 ನಾಯಕರ ಗುಂಪು ಮಹಾನ್ ಉತ್ಸಾಹದಲ್ಲಿದೆ. ಕಳೆದ ಮೂರು ವರ್ಷಗಳಿಂದ ಅಧ್ಯಕ್ಷೀಯ ಸ್ಥಾನದ ಚುನಾವಣೆಗಾಗಿ ಕಾಯುವಿಕೆ ಇದ್ದೇ ಇತ್ತು. ಭಾನುವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಅಂತೂ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಿದೆ. ಅದರಂತೆ ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 19ಕ್ಕೆ ಮತ ಎಣಿಕೆ ನಡೆಯಲಿದೆ.
ಪಕ್ಷ ಬಲವರ್ಧನೆ ಮಾಡಬೇಕು, ನೂತನ ನಾಯಕತ್ವ ಬೇಕು ಎಂದು ಜಿ 23 ನಾಯಕರು ಕಳೆದ ಮೂರು ವರ್ಷಗಳಿಂದಲೂ ಬಲವಾಗಿ ಆಗ್ರಹಿಸುತ್ತ ಬಂದಿದ್ದರು. ಕಾಂಗ್ರೆಸ್ನಲ್ಲಿ ನಮಗೆಲ್ಲ ಬೆಲೆಯಿಲ್ಲ ಎಂದು ಇದೇ ಗುಂಪಿನ ಹಲವು ಪ್ರಮುಖ ನಾಯಕರು ಪಕ್ಷ ಬಿಟ್ಟು ಹೋಗಿದ್ದಾರೆ. ಅದರಲ್ಲೂ ಇತ್ತೀಚೆಗೆ ಗುಲಾಂ ನಬಿ ಆಜಾದ್ ಕೂಡ ರಾಜಿನಾಮೆ ನೀಡಿದ ಬಳಿಕ ಪಕ್ಷ ಬಲವರ್ಧನೆ ಚಟುವಟಿಕೆ ಇನ್ನಷ್ಟು ಚುರುಕು ಪಡೆದುಕೊಂಡ ಲಕ್ಷಣಗಳು ಕಾಣುತ್ತಿವೆ.
ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಜಿ 23 ನಾಯಕರೊಬ್ಬರು ಹಿಂದೂಸ್ತಾನ್ ಟೈಮ್ಸ್ಗೆ ಹೇಳಿಕೆ ನೀಡಿದ್ದು, ‘ನಿಜವಾಗಿಯೂ ಚುನಾವಣೆ ನಡೆಸುತ್ತಾರೋ, ಅಥವಾ ನೆಪಕ್ಕೊಂದು ಚುನಾವಣೆ ಮಾಡುತ್ತಾರೋ ಎಂಬುದನ್ನು ನಾವು ನೋಡಬೇಕು. ಹಾಗೇ, ಈ ಎಲೆಕ್ಷನ್ನಲ್ಲಿ ಮತದಾನ ಮಾಡುವವರ ಪಟ್ಟಿಯನ್ನು ಮೊದಲು ಪರಿಶೀಲನೆ ಮಾಡುತ್ತೇವೆ. ಮತದಾರರನ್ನೂ ಇವರು ಆಯ್ಕೆ ಮಾಡಿಯೇ ಇಟ್ಟಿದ್ದರೆ ಚುನಾವಣೆ ನಡೆಸಾಗಲೀ, ನಾವು ಸ್ಪರ್ಧಿಸಾಗಲೀ ಪ್ರಯೋಜನವಿಲ್ಲ’ ಎಂದು ಹೇಳಿದ್ದಾರೆ. ಹೀಗೆ ಹೇಳಿದ ನಾಯಕನ ಹೆಸರು ಬಹಿರಂಗವಾಗಿಲ್ಲ.
ಚುನಾವಣೆ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಪ್ರಥ್ವಿರಾಜ್ ಚೌವ್ಹಾಣ್, ‘ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನಿಸಿ, ಈಗ ಎರಡು ವರ್ಷಗಳ ಹಿಂದೆ ನಾವು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದೆವು. ಇದೀಗ ತೆಗೆದುಕೊಂಡಿರುವ ಚುನಾವಣೆ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆಂತರಿಕವಾಗಿ ಚುನಾವಣೆ ನಡೆಯದ ಕಾರಣ, ಬೂತ್ ಮಟ್ಟದ ಪದಾಧಿಕಾರಿಗಳೂ ನಿರ್ಧಾರ ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ಇದರಿಂದಾಗಿ ವ್ಯವಸ್ಥೆಯೇ ಹಾಳಾಗತೊಡಗಿತ್ತು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Congress President Election | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಕ್ಟೋಬರ್ 17ಕ್ಕೆ; ಮತ ಎಣಿಕೆ 19ಕ್ಕೆ