ನವದೆಹಲಿ: ಜಿ7 ಶೃಂಗಸಭೆಗಾಗಿ ಜರ್ಮನಿಗೆ (G-7 Summit in Germany) ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು (ಜೂ.27) ಯುಎಸ್ ಅಧ್ಯಕ್ಷ ಜೋ ಬೈಡನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮತ್ತು ಸ್ನೇಹಯುತ ಮಾತುಕತೆ ನಡೆಸಿದ್ದಾರೆ. ಇವರನ್ನೆಲ್ಲ ಭೇಟಿಯಾದ ಕ್ಷಣದ ಫೋಟೋಗಳನ್ನು ನರೇಂದ್ರ ಮೋದಿ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೂ.26ರಂದು ಪ್ರಧಾನಿ ನರೇಂದ್ರ ಮೋದಿ ಜರ್ಮಿನಿಗೆ ತೆರಳಿದ್ದು, ಅಲ್ಲಿನ ಸ್ಕ್ಲೋಸ್ ಎಲ್ಮೌ ಎಂಬ ಹೋಟೆಲ್‌ನಲ್ಲಿ 48ನೇ ಜಿ7 ಶೃಂಗಸಭೆ ನಡೆಯುತ್ತಿದೆ. ಜಿ7 ಗುಂಪಿನಲ್ಲಿರುವ ವಿಶ್ವನಾಯಕರು ಪಾಲ್ಗೊಂಡಿದ್ದಾರೆ.
ಜರ್ಮನಿ ತಲುಪಿದ ಪ್ರಧಾನಿ ನರೇಂದ್ರ ಮೋದಿಯನ್ನು ಅಲ್ಲಿನ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಬರಮಾಡಿಕೊಂಡರು. ನಂತರ ಜಿ7 ಗುಂಪಿನ ನಾಯಕರು ಸೇರಿ ವಿವಿಧ ವಿಷಯಗಳನ್ನು ಚರ್ಚಿಸಿದ್ದಾರೆ. ʼಉಕ್ರೇನ್ ಮೇಲಿನ ಯುದ್ಧ ನಿಲ್ಲಿಸುವಂತೆ ರಷ್ಯಾಕ್ಕೆ ಒತ್ತಡ ಹೇರಲು ಎಲ್ಲರೂ ಬದ್ಧರಾಗಿರಬೇಕುʼ ಎಂದು ಹೇಳಿದ್ದಾರೆ ಮತ್ತು ʼರಷ್ಯಾದ ತೈಲದ ದರಕ್ಕೆ ಗರಿಷ್ಠ ಮಿತಿ ವಿಧಿಸಲುʼ ನಿರ್ಧರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡುತ್ತಿರುವುದನ್ನು ವಿರೋಧಿಸಿ ಈಗಾಗಲೇ ಆ ದೇಶದ ಮೇಲೆ ಹಲವು ನಿರ್ಬಂಧಗಳನ್ನು ಅಮೆರಿಕ, ಇಂಗ್ಲೆಂಡ್ ಮತ್ತಿತರ ದೇಶಗಳು ಹೇರಿವೆ. ಆದರೆ ಭಾರತ ರಷ್ಯಾ-ಉಕ್ರೇನ್ ವಿಚಾರದಲ್ಲಿ ಮೊದಲಿನಿಂದಲೂ ಅಂತರ ಕಾಯ್ದುಕೊಂಡಿದೆ. ಹೀಗಾಗಿ ರಷ್ಯಾದ ತೈಲ ಬೆಲೆ ಮಿತಿಗೊಳಿಸುವ ಬಗ್ಗೆ ಜಿ7 ನಾಯಕರ ಅಂತಿಮ ನಿರ್ಧಾರವೇನು ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಅರ್ಜಿಂಟಿನಾ ಅಧ್ಯಕ್ಷರೊಂದಿಗೆ ಮಾತುಕತೆ
ಭಾನುವಾರ ನರೇಂದ್ರ ಮೋದಿಯವರು ಅರ್ಜಿಂಟಿನಾ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಇದು ಇವರಿಬ್ಬರ ಮೊದಲ ದ್ವಿಪಕ್ಷೀಯ ಮಾತುಕತೆಯಾಗಿದೆ. ʼಹೂಡಿಕೆ, ರಕ್ಷಣಾ ಕ್ಷೇತ್ರದಲ್ಲಿ ಸಹಕಾರ, ಕೃಷಿ, ಹವಾಮಾನ ವೈಪರೀತ್ಯ ಮತ್ತು ಆಹಾರ ಸುರಕ್ಷತೆʼ ಗೆ ಸಂಬಂಧಪಟ್ಟ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಮತ್ತು ಆಲ್ಬರ್ಟೊ ಫೆರ್ನಾಂಡಿಸ್ ಸಮಗ್ರ ಚರ್ಚೆ ನಡೆಸಿದ್ದಾರೆ. ಹಾಗೇ ನರೇಂದ್ರ ಮೋದಿ ಜರ್ಮನಿಯ ಮ್ಯೂನಿಚ್‌ನಲ್ಲಿ ಭಾರತೀಯ ಸಮುದಾಯದವರೊಂದಿಗೂ ಸಂವಾದ ನಡೆಸಿದ್ದಾರೆ.
ಇದನ್ನೂ ಓದಿ: G7 Summit: ಜರ್ಮನಿ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಎಸಿ ಇಲ್ಲದ ಹೋಟೆಲ್‌ನಲ್ಲಿ ಶೃಂಗಸಭೆ !