ಕೋಲ್ಕತ್ತ: ಮಮತಾ ಬ್ಯಾನರ್ಜಿ ಪಕ್ಷ ತೃಣಮೂಲ ಕಾಂಗ್ರೆಸ್ನ ಚುನಾವಣಾ ಪ್ರಚಾರದ ಥೀಮ್ ಆದ ಖೇಲಾ ಹೋಬೆ (ಆಟ ಶುರುವಾಗಿದೆ) ಮತ್ತೆ ಸದ್ದು ಮಾಡುತ್ತಿದೆ. ‘ನಮ್ಮ ಆಟ ಶುರುವಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಬಿಜೆಪಿಯನ್ನು ಸೋಲಿಸುತ್ತೇವೆ. ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಎಂಬುದು ಮನ್ ಕೀ ವ್ಯಥಾ (ನೋವು) ಆಗಿ ಬದಲಾಗಲಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಜಾರ್ಖಂಡ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ಮಾಡಿತ್ತು. ಪ್ರತಿ ಶಾಸಕರಿಗೂ ತಲಾ 10 ಕೋಟಿ ರೂಪಾಯಿ ಆಫರ್ ನೀಡಿತ್ತು. ಆದರೆ ಆಮಿಷ ಒಡ್ಡಿದವರನ್ನೇ ನಾನು ಸಾಕ್ಷಿ ಸಮೇತ ಹಿಡಿದೆ. ನಾವೆಲ್ಲ ಸೇರಿ ಜಾರ್ಕಂಡ್ ಸರ್ಕಾರವನ್ನು ಉಳಿಸಿದೆವು. ನೋಡಿ ನಮ್ಮ ಗೇಮ್ ಪ್ರಾರಂಭವಾಗಿದೆ. ಇದೇ ಪಶ್ಚಿಮ ಬಂಗಾಳದಲ್ಲಿಯೇ ಆಟಕ್ಕೆ ನಾಂದಿ ಹಾಡಿದ್ದೇವೆ. ನಾವೆಲ್ಲ ಪ್ರತಿಪಕ್ಷಗಳೂ ಒಟ್ಟಿಗೇ ಇದ್ದೇವೆ. ನಮ್ಮೊಂದಿಗೆ ನಿತೀಶ್ ಕುಮಾರ್ ಇದ್ದಾರೆ, ಅಖಿಲೇಶ್ ಯಾದವ್, ಹೇಮಂತ್ ಸೊರೆನ್ ಕೂಡ ಜತೆಗಿದ್ದಾರೆ. ಬಿಜೆಪಿಯವರು 280-300 ಸೀಟಿಗೇ ದುರಹಂಕಾರ ಪಡುತ್ತಿದ್ದು, ಅದೇ ಅವರಿಗೆ ಶತ್ರುವಾಗಲಿದೆ. ನೆನಪಿರಲಿ ರಾಜೀವ್ ಗಾಂಧಿಗೆ 400 ಸೀಟ್ಗಳ ಬಲವಿತ್ತು. ಆದರೆ ಅವರೆಂದೂ ಆ ಬಗ್ಗೆ ಅಹಂಕಾರ ಹೊಂದಿರಲಿಲ್ಲ’ ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ತಮ್ಮ ಒಗ್ಗಟ್ಟು ಗಟ್ಟಿಯಾಗಿದೆ ಎಂಬುದನ್ನು ಸಾರಿದ್ದಾರೆ.
ನಾನೇನು ಕೇಂದ್ರ ಸರ್ಕಾರದ ಸೇವಕಿಯಾ?
ಇಂದು ದೆಹಲಿಯ ಸೆಂಟ್ರಲ್ ವಿಸ್ಟಾ ಅವೆನ್ಯೂ (ಕರ್ತವ್ಯ ಪಥ್) ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಉದ್ಘಾಟನೆಗೆ ಕೇಂದ್ರ ಸರ್ಕಾರ ನನ್ನನ್ನು ಸರಿಯಾಗಿ ಆಹ್ವಾನಿಸಿಲ್ಲ. ಉಪಕಾರ್ಯದರ್ಶಿಯ ಸಹಿ ಹಾಕಿ ನನಗೆ ಆಹ್ವಾನ ನೀಡಲಾಗಿದೆ. ಒಬ್ಬ ಉಪಕಾರ್ಯದರ್ಶಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರಾ? ನಾನೇನು ಕೇಂದ್ರ ಸರ್ಕಾರದ ಸೇವಕಿಯಾ? ಎಂದೂ ಇಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಮಮತಾ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ ಪಶ್ಚಿಮ ಬಂಗಾಳ ಮುಖ್ಯಸ್ಥ ಅಮಿತ್ ಮಾಳ್ವಿಯಾ, ‘ನೇತಾಜಿ ಸುಭಾಷ್ ಚಂದ್ರ ಬೋಸ್ ಮೂಲತಃ ಪಶ್ಚಿಮ ಬಂಗಾಳದವರೇ ಆಗಿದ್ದಾರೆ. ಆದರೆ ಅಂಥ ಮಹಾನ್ ವ್ಯಕ್ತಿಗೆ ಮಮತಾ ಬ್ಯಾನರ್ಜಿ ಇದುವರೆಗೆ ಸರಿಯಾಗಿ ಗೌರವ ನೀಡಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡು, ಅವರ ಮೂರ್ತಿಯನ್ನು ಅನಾವರಣಗೊಳಿಸುತ್ತಿದ್ದಾರೆ. ಆದರೆ ಅದನ್ನು ಮಮತಾ ಬ್ಯಾನರ್ಜಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Viral Video | ಸ್ವಾತಂತ್ರ್ಯ ಹಬ್ಬಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ ಭರ್ಜರಿ ಡ್ಯಾನ್ಸ್