ಉತ್ತರ ಪ್ರದೇಶದಲ್ಲಿ ನಿನ್ನೆ ರಾತ್ರಿ ಗ್ಯಾಂಗ್ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ತಮ್ಮ ಅಶ್ರಾಫ್ ಅಹ್ಮದ್ ಹತ್ಯೆ (Atiq Ahmed Murder)ಯಾಗಿದೆ. ಇದೊಂದು ಭಯಾನಕ ಸ್ವರೂಪದ ಕೊಲೆ. ಅತೀಕ್ ಹಾಗೂ ಅಶ್ರಫ್ನನ್ನು ಪ್ರಯಾಗ್ರಾಜ್ ವೈದ್ಯಕೀಯ ಕಾಲೇಜಿಗೆ ಚೆಕ್ಅಪ್ಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಸುತ್ತ ಪೊಲೀಸರು ಇದ್ದರು, ಎದುರು ಮಾಧ್ಯಮದವರು ಮೈಕ್ ಹಿಡಿದು ನಿಂತಿದ್ದರು. ಹಿಂದಿನಿಂದ ಬಂದ ಶೂಟರ್ಗಳು ಇವರಿಬ್ಬರ ತಲೆಗೆ ಗುಂಡು ಹೊಡೆದಿದ್ದಾರೆ. ಅಂದಹಾಗೇ, ಆ ಶೂಟರ್ಗಳು ಪೊಲೀಸರು ಇದ್ದಾಗ್ಯೂ ಅಷ್ಟು ಸಮೀಪ ಬರಲು ಒಂದು ಖತರ್ನಾಕ್ ಐಡಿಯಾವನ್ನೇ ಮಾಡಿದ್ದರು. ತಾವು ಮಾಧ್ಯಮದವರು ಎಂದುಕೊಂಡೇ ಆಗಮಿಸಿದ್ದರು ಎನ್ನಲಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ, ಪ್ರಮುಖ ಟಿವಿ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಹೀಗೆ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆ ಆಗುತ್ತಿದ್ದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತ್ವರಿತವಾಗಿ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಏನೂ ತೊಂದರೆಯಾಗಬಾರದು. ಎಲ್ಲಿಯೂ ಗಲಾಟೆ-ಗಲಭೆಯಾಗದಂತೆ ಎಚ್ಚರಿಕೆ ವಹಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಿ. ಹೈ ಅಲರ್ಟ್ ಆಗಿರಿ ಎಂದು ಸೂಚನೆ ನೀಡಿದ್ದಾರೆ. ಹಾಗೇ, ರಾಜ್ಯದಲ್ಲಿ ಜನರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ಗಾಳಿ ಸುದ್ದಿಗಳನ್ನೂ ನಂಬ ಬೇಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಯಾರಾದರೂ ತಪ್ಪು ಮಾಹಿತಿ ಹಬ್ಬಿಸುತ್ತಿರುವುದು ಕಂಡು ಬಂದಿದ್ದೇ ಆದಲ್ಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಅತೀಕ್, ಅಶ್ರಫ್ ಹತ್ಯೆಯ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಅವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಯುಪಿ ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್, ಡಿಜಿ ಆರ್.ಕೆ.ವಿಶ್ವಕರ್ಮ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಹಾಗೇ, ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ವಿಚಾರಣಾ ಆಯೋಗವನ್ನು ರಚಿಸಲು ಸಿಎಂ ಯೋಗಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Atiq Ahmed Shot Dead: ಮಾಧ್ಯಮದವರಂತೆ ಬಂದ ಕೊಲೆಗಾರರು, ಅತೀಕ್ ಅಹ್ಮದ್ ಶೂಟರ್‌ಗಳ ಚಿತ್ರಗಳು ಇಲ್ಲಿವೆ
2005ರ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್ ಹತ್ಯೆ, ಆ ಕೊಲೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಈ ಅತೀಕ್ ಅಹ್ಮದ್ ಆರೋಪಿ. ಅಶ್ರಫ್ ವಿರುದ್ಧ ಕೂಡ ಹಲವು ಕೇಸ್ಗಳಿದ್ದು ಇಬ್ಬರೂ ಜೈಲಲ್ಲಿ ಇದ್ದರು. ಫೆಬ್ರವರಿಯಲ್ಲಿ ನಡೆದ ಉಮೇಶ್ ಪಾಲ್ ಹತ್ಯೆ ಕೇಸ್ನಲ್ಲಿ ಆರೋಪಿಯಾಗಿದ್ದ ಅಸಾದ್ ಅಹ್ಮದ್ (ಅತೀಕ್ ಅಹ್ಮದ್ನ ಮಗ)ನನ್ನು ಪೊಲೀಸರೇ ಎನ್ಕೌಂಟರ್ನಲ್ಲಿ ಕೊಂದು ಹಾಕಿದ್ದರು. ಇನ್ನು ಅತೀಕ್ ಕೂಡ ಈ ಭಯ ವ್ಯಕ್ತಪಡಿಸಿದ್ದ. ನಾನೂ ಎನ್ಕೌಂಟರ್ ಆಗುತ್ತೇನೆ ಎಂದಿದ್ದ. ಆದರೆ ಇಲ್ಲಿ ಸ್ವಲ್ಪ ವಿಭಿನ್ನವಾಗಿದೆ. ಪೊಲೀಸರ ಗುಂಡಿನ ಬದಲು ಬೇರೆ ಯಾವುದೋ ಗ್ಯಾಂಗ್ಸ್ಟರ್ಗಳ ಗುಂಡೇಟಿಗೆ ಅಣ್ಣತಮ್ಮ ಸತ್ತಿದ್ದಾರೆ. ಸದ್ಯ ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳಲ್ಲೂ ಸೆಕ್ಷನ್ 144 ಜಾರಿಯಾಗಿದೆ.