ನವದೆಹಲಿ: ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ಆರೋಪಿ, ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಬಂಧಿತನಾಗಿದ್ದಾನೆ. ಈತನನ್ನು ಯುಎಸ್ನ ಕ್ಯಾಲಿಫೋರ್ನಿಯಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಕ್ಯಾಲಿಫೋರ್ನಿಯಾದಿಂದ ಭಾರತದ ತನಿಖಾ ದಳಗಳಿಗೆ ಅಧಿಕೃತ ಮಾಹಿತಿ ಬಂದಿಲ್ಲ. ಗೋಲ್ಡಿ ಬ್ರಾರ್ 2017ರಿಂದಲೂ ಕೆನಡಾದಲ್ಲಿಯೇ ಇದ್ದ. ಇತ್ತೀಚೆಷ್ಟೇ ಕ್ಯಾಲಿಫೋರ್ನಿಯಾಕ್ಕೆ ಹೋಗಿದ್ದ. ಅಲ್ಲಿಯೇ ಈಗ ಅರೆಸ್ಟ್ ಆಗಿದ್ದಾನೆ ಎಂದು ವರದಿಯಾಗಿದೆ.
ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ ಅವರನ್ನು 2022ರ ಮೇ ತಿಂಗಳಲ್ಲಿ ಮಾನ್ಸಾ ಜಿಲ್ಲೆಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಸಿಧು ಹತ್ಯೆಯ ಮಾಸ್ಟರ್ ಮೈಂಡ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಎಂಬುದು ಸ್ಪಷ್ಟವಾಗಿದೆ. ಬಿಷ್ಣೋಯಿಯನ್ನು ಈಗಾಗಲೇ ಎನ್‌ಐಎ ಕಸ್ಟಡಿಗೆ ತೆಗೆದುಕೊಂಡಿದೆ. ಈ ಬ್ರಾರ್ ಕೂಡ ಅದೇ ಬಿಷ್ಣೋಯಿ ಗ್ಯಾಂಗ್ನವನು. ಬ್ರಾರ್ ಮೂಲತಃ ಪಂಜಾಬ್ನ ಮುಕ್ತ್ಸಾರ್ನವನಾಗಿದ್ದು, ಕೆನಡಾದಲ್ಲಿ ನೆಲೆಸಿದ್ದ. ಇವನ ವಿರುದ್ಧ ಇಂಟರ್ಪೋಲ್ ರೆಡ್ ನೋಟಿಸ್ ಜಾರಿಯಾಗಿತ್ತು. ಇವನ ವಿರುದ್ಧ ಕೇವಲ ಸಿಧು ಮೂಸೆ ಹತ್ಯೆ ಕೇಸ್ ಮಾತ್ರವಲ್ಲ, ಇನ್ನಿತರ ಕೆಲವು ಹತ್ಯೆ, ಕ್ರಿಮಿನಲ್ ಪಿತೂರಿ, ಕಾನೂನು ಬಾಹಿರ ಶಸ್ತ್ರಾಸ್ತ್ರಗಳ ಪೂರೈಕೆ, ಹತ್ಯೆ ಪ್ರಯತ್ನ ಇನ್ನಿತರ ಅನೇಕ ಕೇಸ್ಗಳಲ್ಲಿ ಬೇಕಾದವನಾಗಿದ್ದ.
ಭಾರತೀಯ ತನಿಖಾ ದಳಗಳು ಕೆನಡಾದಲ್ಲಿರುವ ಬ್ರಾರ್ ಮೇಲೆ ಕಣ್ಗಾವಲು ಇಟ್ಟಿದ್ದವು. ಇವನಷ್ಟೇ ಅಲ್ಲ, ಅರ್ಶ್ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಾಲಾ, ಲಖ್ಬೀರ್ ಸಿಂಗ್ ಅಲಿಯಾ್ ಲಂಡಾ, ಚರಣಜಿತ್ ಸಿಂಗ್ ಅಲಿಯಾಸ್ ಬಿಹ್ಲಾ, ರಮಣ್ದೀಪ್ ಸಿಂಗ್ ಅಲಿಯಾನ್ ರಮಣ್ ಜಡ್ಜ್, ಗುರ್ಪಿಂದರ್ ಸಿಂಗ್, ಬಾಬಾ ಡಲ್ಲಾ ಮತ್ತು ಸುಖ್ದುಲ್ ಸಿಂಗ್ ಅಲಿಯಾಸ್ ಸುಖಾ ಡುನೆಕೆ ಮತ್ತಿತರರ ಮೇಲೆ ಕೂಡ ಕಣ್ಗಾವಲು ಇಟ್ಟಿವೆ. ಇತ್ತೀಚೆಗೆ ಅಂದರೆ, ನವೆಂಬರ್ 20ರಂದು ಬ್ರಾರ್ ಕೆನಡಾದಿಂದ ಯುಎಸ್ಗೆ ತೆರಳಿದ್ದು, ಇದರಿಂದಾಗಿ ಇಂಡಿಯನ್ ಏಜೆನ್ಸಿಗಳ ಟ್ರ್ಯಾಕ್ ತಪ್ಪಿತ್ತು ಎಂದೂ ವರದಿಯಾಗಿದೆ. ಇನ್ನು ಯುಎಸ್ನಲ್ಲಿ ಬಿಷ್ಣೋಯಿ ಬಂಧಿತನಾದ ಬಗ್ಗೆ ಭಾರತೀಯ ಏಜೆನ್ಸಿಗಳು ದೃಢಪಡಿಸುವುದ ಬಾಕಿ ಇದೆ.
ಇದನ್ನೂ ಓದಿ: Sidhu Moose Wala Murder | ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ 10 ದಿನ ಎನ್‌ಐಎ ಕಸ್ಟಡಿಗೆ