ಪಂಜಾಬ್ನ ನಟೋರಿಯಸ್ ಗ್ಯಾಂಗ್ಸ್ಟರ್, ಗಾಯಕ/ರಾಜಕಾರಣಿ ಸಿಧು ಮೂಸೇವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯಿ (Lawrence Bishnoi) ತೀವ್ರ ಅನಾರೋಗ್ಯಕ್ಕೀಡಾಗಿದ್ದಾನೆ. ಭಟಿಂಡಾ ಜೈಲಿನಲ್ಲಿದ್ದ ಲಾರೆನ್ಸ್ ಬಿಷ್ಣೋಯಿಗೆ ಕಳೆದ ಕೆಲವು ದಿನಗಳಿಂದಲೂ ಜ್ವರದಿಂದ ಬಳಲುತ್ತಿದ್ದ. ಆದರೆ ನಿನ್ನೆ ತಡರಾತ್ರಿ ಹೊತ್ತಿಗೆ ಅವನ ಆರೋಗ್ಯದಲ್ಲಿ ತುಂಬ ಏರುಪೇರಾಯಿತು. ಹೀಗಾಗಿ ಫರೀದ್ಕೋಟ್ನಲ್ಲಿರುವ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಸೇರಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಲಾರೆನ್ಸ್ ಬಿಷ್ಣೋಯಿಗೆ ಕಳೆದ ಕೆಲವು ದಿನಗಳಿಂದಲೂ ಅನಾರೋಗ್ಯವಿದೆ. ಅವನಿಗೆ ಜಾಯಂಡೀಸ್ ಕೂಡ ಇದೆ. ಶ್ರಾವಣದ ನಿಮಿತ್ತ ಜುಲೈ 4ರಂದು ಉಪವಾಸವನ್ನೂ ಮಾಡಿದ್ದ. ನಿನ್ನೆಯಿಂದ ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದಲೇ ಅವನ ಆರೋಗ್ಯ ಹದಗೆಟ್ಟಿದೆ ಎಂದು ಬಿಷ್ಣೋಯಿ ಪರ ವಕೀಲರು ಮಾಹಿತಿ ನೀಡಿದ್ದಾರೆ. ಇಡೀ ಉತ್ತರ ಭಾರತದಲ್ಲೇ ನಟೋರಿಯಸ್ ಗ್ಯಾಂಗ್ಸ್ಟರ್ ಎನ್ನಿಸಿರುವ ಲಾರೆನ್ಸ್ ಬಿಷ್ಣೋಯಿ ವಿರುದ್ಧ ಸುಲಿಗೆ, ಹತ್ಯೆ ಸೇರಿ 20ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ.
ಇದನ್ನೂ ಓದಿ: Prince Tewatia Killed: ತಿಹಾರ ಜೈಲಲ್ಲಿ ಗ್ಯಾಂಗ್‌ವಾರ್; ಲಾರೆನ್ಸ್ ಬಿಷ್ಣೋಯಿ ಆಪ್ತ ಪ್ರಿನ್ಸ್ ತೆವಾಟಿಯಾ ಹತ್ಯೆ
ಬಹುತೇಕ ಕೇಸ್ಗಳ ವಿಚಾರಣೆ ಇನ್ನೂ ಕೋರ್ಟ್ನಲ್ಲಿ ನಡೆಯುತ್ತಿದೆ. ಜೂ.14ರಂದು ದೆಹಲಿ ಸಾಕೇತ್ ಕೋರ್ಟ್ನಲ್ಲಿ ಸುಲಿಗೆ ಪ್ರಕರಣವೊಂದರ ವಿಚಾರಣೆ ನಡೆದಿತ್ತು. ಈ ಕೇಸ್ನಲ್ಲಿ ಬಿಷ್ಣೋಯಿಗೆ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ಬಳಿಕ ಸಾಕೇತ್ ಕೋರ್ಟ್ ಲಾರೆನ್ಸ್ ಬಿಷ್ಣೋಯಿಯನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿತ್ತು. ಈ ಹಿಂದೆ ತಿಹಾರ್ ಜೈಲಿನಲ್ಲಿ ಇದ್ದ ಲಾರೆನ್ಸ್ ಬಿಷ್ಣೋಯಿ ಭಟಿಂಡಾ ಜೈಲಿಗೆ ಶಿಫ್ಟ್ ಆಗಿದ್ದ.
ಲಾರೆನ್ಸ್ ಬಿಷ್ಣೋಯಿದು ಅತ್ಯಂತ ದೊಡ್ಡ ಗ್ಯಾಂಗ್. ಇವನ ಶೂಟರ್ಗಳು ದೇಶಾದ್ಯಂತ 700ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಸಲ್ಮಾನ್ ಖಾನ್ ಹತ್ಯೆಗೆ ಹಪಹಪಿಸುತ್ತಿದ್ದಾನೆ. ಸಲ್ಮಾನ್ ಖಾನ್ ಅವರು 1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದ ಜೋಧ್‌ಪುರಕ್ಕೆ ಹೋಗಿದ್ದರು. ಇದೇ ವೇಳೆ ಸಫಾರಿಗೆ ಹೋದ ಅವರು ಒಂದು ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಈ ಕೃಷ್ಣಮೃಗವನ್ನು ಬಿಷ್ಣೋಯಿ ಸಮುದಾಯದವರು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಭಾವಿಸುತ್ತಾರೆ. ಅಂಥ ಕೃಷ್ಣಮೃಗವನ್ನು ಕೊಂದ ಸಲ್ಮಾನ್ ಖಾನ್ರನ್ನು ಹತ್ಯೆ ಮಾಡಿಯೇ ತೀರುತ್ತೇನೆ ಎಂಬುದು ಲಾರೆನ್ಸ್ ಬಿಷ್ಣೋಯಿ ಶಪಥ. ಈಗಾಗಲೇ ಆತ ಹಲವು ಸಲ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ಜೈಲಲ್ಲೇ ಕುಳಿತು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲೂ ಸಲ್ಮಾನ್ ಖಾನ್ ಹತ್ಯೆಯೇ ಗುರಿ ಎಂದು ಹೇಳಿದ್ದ.