ನವ ದೆಹಲಿ: ಜೈಲಿನಲ್ಲಿರುವ ಉತ್ತರ ಪ್ರದೇಶದ ಗ್ಯಾಂಗ್ಸ್ಟರ್/ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಪೊಲೀಸರಿಗೆ ರಿಮ್ಯಾಂಡ್ ಪ್ರತಿ (ವಿಚಾರಣೆಗೆ ಲಿಖಿತ ಉತ್ತರ)ಯನ್ನು ನೀಡಿದ್ದು, ವಕೀಲ ಉಮೇಶ್ ಪಾಲ್ ಹತ್ಯೆಗೆ ತಾನು ಜೈಲಿನಲ್ಲಿ ಇದ್ದುಕೊಂಡೇ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ಉಮೇಶ್ ಪಾಲ್ ಜತೆಗೆ ಇಬ್ಬರು ಗನ್ಮೆನ್ಗಳಿದ್ದಾರೆ ಎಂಬ ವಿಷಯವನ್ನು ನನ್ನ ಪತ್ನಿ ನನಗೆ ತಿಳಿಸಿದ್ದಳು. ಅವರನ್ನೂ ಹತ್ಯೆ ಮಾಡಲೂ ನಾವು ಯೋಜನೆ ರೂಪಿಸಿದ್ದೆವು’ ಎಂದು ಹೇಳಿದ್ದಾನೆ. ಈ ಮೂಲಕ ಉಮೇಶ್ ಪಾಲ್ ಹತ್ಯೆಯ ಮುಖ್ಯ ಸಂಚುಕೋರ ತಾನು ಮತ್ತು ತನ್ನ ಪತ್ನಿ, ಮಕ್ಕಳೆಲ್ಲ ನನಗೆ ಸಹಾಯ ಮಾಡಿದ್ದರು ಎಂದು ತಿಳಿಸಿದ್ದಾನೆ. ಆತ ಈ ರಿಮ್ಯಾಂಡ್ ಪ್ರತಿಯನ್ನು ಏಪ್ರಿಲ್ 12ರಂದು ಪೊಲೀಸರಿಗೆ ನೀಡಿದ್ದ, ಅದರ ಮರುದಿನ ಅಂದರೆ ಏಪ್ರಿಲ್ 13ರಂದು ಅವನ ಪುತ್ರ ಅಸಾದ್ ಅಹ್ಮದ್ ಎನ್ಕೌಂಟರ್ ಆಗಿದೆ.
ಬರೀ ಇಷ್ಟೇ ಅಲ್ಲ, ‘ನನಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಜತೆ ಮತ್ತು ಉಗ್ರಸಂಘಟನೆ ಲಷ್ಕರೆ ತೊಯ್ಬಾದ ಜತೆ ಸಂಪರ್ಕವಿದೆ. ಹೀಗಾಗಿ ನನಗೆ ಯಾವತ್ತೂ ಶಸ್ತ್ರಾಸ್ತ್ರಗಳ ಕೊರತೆ ಆಗಿಯೇ ಇರಲಿಲ್ಲ. ಪಾಕಿಸ್ತಾನದಿಂದ ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಪಂಜಾಬ್ ಗಡಿಗೆ ಕಳಿಸಲಾಗುತ್ತಿತ್ತು. ಆ ಡ್ರೋನ್ ಅಲ್ಲಿ ಕೆಡವಿ ಹೋಗುತ್ತಿತ್ತು. ಸ್ಥಳೀಯವಾಗಿ ಇರುವ ನಮ್ಮ ಗ್ಯಾಂಗ್ನವರು ಅದನ್ನು ಸಂಗ್ರಹ ಮಾಡಿ ಇಟ್ಟುಕೊಂಡು, ನಮಗೆ ಒದಗಿಸುತ್ತಿದ್ದರು. ಹಾಗೇ, ಜಮ್ಮು -ಕಾಶ್ಮೀರದ ಉಗ್ರರಿಗೂ ಹೀಗೇ ಶಸ್ತ್ರಾಸ್ತ್ರ ಪೂರೈಕೆ ಆಗುತ್ತದೆ ಎಂದೂ ತಿಳಿಸಿದ್ದಾನೆ.
‘ನನ್ನ ಪತ್ನಿ ಶೈಷ್ಟಾ ಪರ್ವೀನ್ಗೆ ಹೇಳಿ ಜೈಲಿನಲ್ಲಿದ್ದ ನನಗೆ ಒಂದು ಸೆಲ್ಫೋನ್ ಮತ್ತು ಸಿಮ್ ಕಾರ್ಡ್ನ್ನು ತರಿಸಿಕೊಂಡಿದ್ದೆ. ಇದಕ್ಕೆ ಅಲ್ಲಿಯೇ ಇದ್ದ ಒಬ್ಬ ಅಧಿಕಾರಿ ಸಹಾಯ ತೆಗೆದುಕೊಳ್ಳಲಾಗಿತ್ತು. ಹಾಗೇ ನನ್ನ ತಮ್ಮ ಅಶ್ರಾಫ್ಗೂ ಒಂದು ಮೊಬೈಲ್ ತಂದುಕೊಡಲಾಗಿತ್ತು. ಈ ಮೊಬೈಲ್ ಮೂಲಕವೇ ಸಂದೇಶ ಪಡೆಯುತ್ತಿದ್ದೆ ಮತ್ತು ಸಂದೇಶ ರವಾನೆ ಮಾಡುತ್ತಿದ್ದೆ. ಉಮೇಶ್ ಪಾಲ್ ಜತೆಗೆ ಇದ್ದ ಗನ್ಮೆನ್ಗಳನ್ನು ಕೊಲ್ಲುವುದೂ ಪೂರ್ವಯೋಜಿತವೇ ಆಗಿತ್ತು ಎಂಬಿತ್ಯಾದಿ ವಿಷಯಗಳನ್ನು ಹೇಳಿದ್ದಾರೆ. ಸದ್ಯ ಆತನ ಪತ್ನಿ ಶೈಷ್ಟಾ ತಲೆಮರೆಸಿಕೊಂಡಿದ್ದಾಳೆ.
2005ರಲ್ಲಿ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್ ಹತ್ಯೆಯಾಗಿತ್ತು. ಆ ಹತ್ಯೆಯ ಪ್ರಮುಖ ಆರೋಪಿ ಅತೀಕ್ ಅಹ್ಮದ್ ಜೈಲಲ್ಲಿ ಇದ್ದ. ಇನ್ನು ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ರನ್ನು 2006ರಲ್ಲಿ ಅಪಹರಣ ಮಾಡಿ, ಸಾಕ್ಷಿ ಹೇಳದಂತೆ ಬೆದರಿಸಲಾಗಿತ್ತು. ಆ ಕೇಸ್ನಲ್ಲೂ ಅತೀಕ್ ಅಹ್ಮದ್ ಪ್ರಮುಖ ಆರೋಪಿ ಎಂಬುದು ಇತ್ತೀಚೆಗಷ್ಟೇ ಕೋರ್ಟ್ ನೀಡಿರುವ ತೀರ್ಪು. ಇನ್ನು ಉಮೇಶ್ ಪಾಲ್ ಇದೇ ವರ್ಷ ಫೆಬ್ರವರಿಯಲ್ಲಿ ಹತ್ಯೆಗೀಡಾಗಿದ್ದರು. ಅವರ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಶೂಟರ್ಗಳನ್ನೆಲ್ಲ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಉಮೇಶ್ ಪಾಲ್ ಹತ್ಯೆಯ ದಿನ ಕಾರಿನಲ್ಲಿದ್ದ ಅತೀಕ್ ಅಹ್ಮದ್ ಪುತ್ರ ಅಸಾದ್ ಅಹ್ಮದ್ ಕೂಡ ಎನ್ಕೌಂಟರ್ನಲ್ಲಿ ಸತ್ತಿದ್ದಾನೆ. ಇನ್ನು ಉಮೇಶ್ ಪಾಲ್ ಹತ್ಯೆಗೆ ಸಂಚು ರೂಪಿಸಿದ್ದು ತಾನೇ ಎಂದು ಅತೀಕ್ ಅಹ್ಮದ್ ಈಗ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: Asad Encounter: ಮಗ ಎನ್ಕೌಂಟರ್ ಆದ ಸುದ್ದಿ ಕೇಳಿ ಕೋರ್ಟ್ನಲ್ಲಿಯೇ ದೊಡ್ಡದಾಗಿ ಅಳಲು ಶುರುಮಾಡಿದ ಅತೀಕ್ ಅಹ್ಮದ್