ಲಖನೌ: ಗ್ಯಾಂಗ್ಸ್ಟರ್/ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವನ ತಮ್ಮ ಅಶ್ರಫ್ ಅಹ್ಮದ್ನನ್ನು ಕೊಂದ ಶೂಟರ್ಗಳಾದ ಲೋವ್ಲೇಶ್, ಸನ್ನಿ ಮತ್ತು ಅರುಣ್ ಮೌರ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಲೋವ್ಲೇಶ್ ತಿವಾರಿ ಮತ್ತು ಸನ್ನಿಯ ಕುಟುಂಬದವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರೂ ಕೂಡ ಲೋವ್ಲೇಶ್ ಮತ್ತು ಸನ್ನಿ ಬಗ್ಗೆ ಒಳ್ಳೆಯ ಮಾತುಗಳನ್ನಾಡಲಿಲ್ಲ. ಲೋವ್ಲೇಶ್ ಅಮ್ಮ ಆಶಾ ಅವರಂತೂ ಮಾಧ್ಯಮಗಳ ಎದುರು ಗೋಳೋ ಎಂದು ಅಳುತ್ತ ‘ಅವನ ಅದೃಷ್ಟವೇನಿದೆಯೋ, ಅದೇ ಆಗುತ್ತದೆ’ ಎಂದಿದ್ದಾರೆ. ‘ಅವನು ಧಾರ್ಮಿಕತೆಯಲ್ಲಿ ತುಂಬ ಆಸಕ್ತಿ ಹೊಂದಿದ್ದ. ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಿದ್ದ. ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಇತ್ತೀಚೆಗೆ ಅವನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮನೆಯಿಂದ ಹೋದಾಗಿನಿಂದ ನಾವು ಅವನ ಬಳಿ ಮಾತನಾಡಿರಲಿಲ್ಲ’ ಎಂದಿದ್ದಾರೆ.
ಇನ್ನು ಲೋವ್ಲೇಶ್ ತಂದೆ ಯಾಗ್ಯಾ ತಿವಾರಿ ಪ್ರತಿಕ್ರಿಯೆ ನೀಡಿ ‘ಅವನು ನನ್ನ ಮಗ ಹೌದು. ನಾವು ಘಟನೆಯನ್ನು ಟಿವಿಯಲ್ಲೇ ನೋಡಿದ್ದೇವೆ. ಅವನಿಂದ ಇಂಥ ಕೃತ್ಯ ನಿರೀಕ್ಷೆ ಮಾಡಿರಲಿಲ್ಲ. ಅವನು ನಮ್ಮೊಂದಿಗೆ ಇರುತ್ತಿರಲಿಲ್ಲ. ಕುಟುಂಬದ ಯಾವ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿರಲಿಲ್ಲ. ಐದಾರು ದಿನಕ್ಕೊಮ್ಮೆ ಒಂದು ಸಲ ಮನೆಗೆ ಬಂದು ಹೋಗುತ್ತಿದ್ದ. ನಾನಂತೂ ಅವನ ಬಳಿ ಸರಿಯಾಗಿ ಮಾತನಾಡದೆ ವರ್ಷಗಳೇ ಕಳೆದು ಹೋದವು’ ಎಂದಿದ್ದಾರೆ.
ಅಷ್ಟಲ್ಲದೆ, ಲೋವ್ಲೇಶ್ ಮೇಲೆ ಈಗಾಗಲೇ ಒಂದಷ್ಟು ಕೇಸ್ಗಳು ದಾಖಲಾಗಿವೆ. ಅವನು ಹಿಂದೊಮ್ಮೆ ಜೈಲಿಗೆ ಕೂಡ ಹೋಗಿ ಬಂದಿದ್ದ. ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಡ್ರಗ್ ಅಡಿಕ್ಟ್ ಕೂಡ ಹೌದು. ನಮಗೆ ನಾಲ್ವರು ಮಕ್ಕಳಿದ್ದಾರೆ. ಅದರಲ್ಲಿ ಲೋವ್ಲೇಶ್ ನಮ್ಮಿಂದ ದೂರವೇ ಉಳಿದಿದ್ದ. ಅವನ ಬಗ್ಗೆ ಹೇಳಲು ಇನ್ನೇನೂ ಇಲ್ಲ’ ಎಂದಿದ್ದಾರೆ.
ಇನ್ನೊಬ್ಬ ಶೂಟರ್ ಸನ್ನಿ ಸಿಂಗ್ ಸಹೋದರ ಪಿಂಟು ಸಿಂಗ್ ಮಾಧ್ಯಮಗಳ ಬಳಿ ಮಾತನಾಡಿ, ‘ಸನ್ನಿ ಸದಾ ಹೊರಗೆಯೇ ಅಲೆದಾಡುತ್ತಿದ್ದ. ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಏನೂ ಕೆಲಸ ಮಾಡುತ್ತಿರಲಿಲ್ಲ. ನಮ್ಮಿಂದ ಪ್ರತ್ಯೇಕವಾಗಿಯೇ ಇದ್ದ. ಅವನು ಕ್ರಿಮಿನಲ್ ಆಗಿದ್ದು ನಮಗೆ ಗೊತ್ತಿರಲಿಲ್ಲ’ ಎಂದಿದ್ದಾರೆ.
ಶೂಟರ್ಗಳಲ್ಲಿ ಸನ್ನಿ ಸಿಂಗ್ ಹಮೀರ್ಪುರ್ ಜಿಲ್ಲೆಯವನಾಗಿದ್ದು, ಲೋವ್ಲೇಶ್ ತಿವಾರಿ ಬಾಂಡಾದ ಕೋಟ್ವಾಲಿಯವನು. ಹಾಗೆ, ಅರುಣ್ ಮೌರ್ಯ, ಬಾಘೇಲಾ ಪುಖ್ತಾ ಎಂಬ ಹಳ್ಳಿಯವನಾಗಿದ್ದಾನೆ. ಇದರಲ್ಲಿ ಲೋವ್ಲೇಶ್ ತಿವಾರಿ ತಾನು ಬಜರಂಗದಳ ನಾಯಕ ಮತ್ತು ಜಿಲ್ಲಾ ಸಹ ಪ್ರಮುಖ್ ಎಂದು ತನ್ನ ಫೇಸ್ಬುಕ್ ಪ್ರೊಫೈಲ್ನಲ್ಲಿ ಬರೆದುಕೊಂಡಿದ್ದಾನೆ. ಸನ್ನಿ ಸಿಂಗ್ ಬಿಎ ಪದವಿ ಪ್ರಥಮ ವರ್ಷ ಮಾತ್ರ ಮುಗಿಸಿ ನಂತರ ಕಾಲೇಜು ಬಿಟ್ಟವನು. ಅವನ ವಿರುದ್ಧ ಈಗಾಗಲೇ 17 ಕ್ರಿಮಿನಲ್ ಕೇಸ್ಗಳಿವೆ. 3ವರ್ಷಗಳ ಹಿಂದೆ ಹುಡುಗಿಯೊಬ್ಬಳನ್ನು ಚುಡಾಯಿಸಿ, ಜೈಲು ಪಾಲಾಗಿದ್ದ. ಕುರಾರಾ ಪೊಲೀಸ್ ಸ್ಟೇಶನ್ನಲ್ಲಿ ಹಿಸ್ಟರಿ ಶೀಟರ್ ಆಗಿದ್ದಾನೆ.
ಇನ್ನೊಬ್ಬಾತ ಅರುಣ್ ಮೌರ್ಯ ಅನಾಥ. ಇವನ ಅಪ್ಪ-ಅಮ್ಮ ತೀರಿಕೊಂಡಿದ್ದಾರೆ. ಇವನ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಇರುವುದು ಕಸ್ಗಂಜ್ ಜಿಲ್ಲೆಯ ಬಾಘೇಲ್ ಪುಖ್ತಾ ಹಳ್ಳಿಯಲ್ಲಿ. ಈ ಹಳ್ಳಿಯನ್ನು ಅರುಣ್ 11ವರ್ಷಗಳ ಹಿಂದೆಯೇ ತೊರೆದಿದ್ದಾನೆ. ಹಾಗಿದ್ದಾಗ್ಯೂ ಪೊಲೀಸರು ಇಲ್ಲಿಗೆ ಆಗಮಿಸಿ ಅರುಣ್ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಅವನ ಚಿಕ್ಕಮ್ಮ ಲಕ್ಷ್ಮೀಯನ್ನು ಪ್ರಶ್ನಿಸಿದಾಗ ಅವರು ‘ಆ ಹುಡುಗ ಅರುಣ್ ಅಪ್ಪ-ಅಮ್ಮ ತೀರಿಕೊಂಡು 10-11ವರ್ಷವಾಯಿತು. ಪಾಲಕರು ಹೋದ ನಂತರ ಅವನೂ ಹಳ್ಳಿ ಬಿಟ್ಟು ಹೋಗಿದ್ದಾನೆ. ತಿರುಗಿ ಈ ಕಡೆ ಬರಲಿಲ್ಲ ಎಂದು ಪೊಲೀಸರಿಗೆ ಉತ್ತರಿಸಿದ್ದಾಗಿ ಮಾಹಿತಿ ಸಿಕ್ಕಿದೆ.