ಉತ್ತರ ಪ್ರದೇಶದಲ್ಲಿ ಗ್ಯಾಂಗ್ಸ್ಟರ್ಗಳು ಕೋರ್ಟ್ನಿಂದ ಶಿಕ್ಷೆ ಪಡೆದ ಬೆನ್ನಲ್ಲೇ ತಮ್ಮ ಪ್ಯಾಂಟ್ ಒದ್ದೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಕಾನೂನಿನ ಹೆದರಿಕೆ ಇಲ್ಲದೆ ಜನರನ್ನು ಸುಲಿಗೆ ಮಾಡುತ್ತಿದ್ದವರು, ಬೆದರಿಕೆಯೊಡ್ಡಿ ಅವರನ್ನ ಅಪಹರಣ ಮಾಡುತ್ತಿದ್ದವರೆಲ್ಲ ಈಗ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ ಮತ್ತು ಅವರ ಪ್ಯಾಂಟ್ ಒದ್ದೆಯಾಗುತ್ತಿರುವುದು ಕಾಣುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಹೇಳಿದ್ದಾರೆ.
ಗೋರಖ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ‘ಪ್ರತಿಯೊಬ್ಬರ ಸುರಕ್ಷತೆಯೂ ನಮ್ಮ ಸರ್ಕಾರದ ಜವಾಬ್ದಾರಿ. ನಾಗರಿಕರೆಲ್ಲರೂ ನೆಮ್ಮದಿಯಿಂದ ಬದುಕಬೇಕು ಎಂಬುದು ಆಶಯ. ಆರು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಗೂಂಡಾಗಳು, ಮಾಫಿಯಾಗಳು ಇಲ್ಲಿನ ಉದ್ಯಮಿಗಳನ್ನು, ಜನರನ್ನು ಬಹಿರಂಗವಾಗಿ ಬೆದರಿಸುತ್ತಿದ್ದರು. ಅವರನ್ನು ಅಪಹರಣ ಮಾಡುತ್ತಿದ್ದರು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಎಲ್ಲವೂ ಬದಲಾಗಿದೆ. ಅಂಥ ಗೂಂಡಾಗಳೆಲ್ಲ ಈಗ ತಮ್ಮ ಜೀವ ಉಳಿಸಿಕೊಳ್ಳಲು ಓಡುವಂತಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.
2005ರಲ್ಲಿ ನಡೆದಿದ್ದ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್ ಹತ್ಯೆ ಕೇಸ್ನಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು 2006ರಲ್ಲಿ ಅಪಹರಣ ಮಾಡಿದ್ದ ಪ್ರಕರಣದಲ್ಲಿ ಗ್ಯಾಂಗ್ಸ್ಟರ್/ರಾಜಕಾರಣಿ ಅತೀಕ್ ಅಹ್ಮದ್ಗೆ ಪ್ರಯಾಗ್ರಾಜ್ನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ,ಮಾರ್ಚ್ 28ರಂದು ತೀರ್ಪು ನೀಡಿದೆ. ಈ ಅತೀಕ್ ಅಹ್ಮದ್ ಸಮಾಜವಾದಿ ಪಕ್ಷದ ರಾಜಕಾರಣಿಯಾಗಿದ್ದವನು. 2005ರಲ್ಲಿ ನಡೆದಿದ್ದ ಬಿಎಸ್ಪಿ ಶಾಸಕ ರಾಜು ಹತ್ಯೆ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿದ್ದ ಅತೀಕ್ನನ್ನು ಸಮಾಜವಾದಿ ಪಕ್ಷ 2008ರಲ್ಲಿ ಉಚ್ಚಾಟನೆ ಮಾಡಿತು. ಅತೀಕ್ ಆಗಿನಿಂದಲೂ ಜೈಲಿನಲ್ಲಿಯೇ ಇದ್ದಾನೆ. ಇಷ್ಟರ ಮಧ್ಯೆ ಉಮೇಶ್ ಪಾಲ್ ಅಪಹರಣ ಕೇಸ್ನಲ್ಲೂ ಆರೋಪ ಸಾಬೀತಾಗಿದೆ.
ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಆರೋಪಿ ಆತಿಕ್ ಅಹ್ಮದ್ ಕುಟುಂಬದ ವಿರುದ್ಧ 160 ಎಫ್ಐಆರ್; ಸುಪ್ರೀಂಕೋರ್ಟ್ ಮೊರೆ ಹೋದ ಗ್ಯಾಂಗ್ಸ್ಟರ್
ಉಮೇಶ್ ಪಾಲ್ರನ್ನು ಫೆಬ್ರವರಿಯಲ್ಲಿ ಪ್ರಯಾಗ್ರಾಜ್ನಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಹೀಗೆ ಉಮೇಶ್ ಪಾಲ್ ಹತ್ಯೆಯಾದ ಬೆನ್ನಲ್ಲೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಉತ್ತರಿಸಿದ್ದ ಯೋಗಿ ಆದಿತ್ಯನಾಥ್ ‘ನೀವು ಪೋಷಿಸಿರುವ ಎಲ್ಲ ಗ್ಯಾಂಗ್ಸ್ಟರ್ಗಳಿಗೂ ನಾವು ಮಣ್ಣುಮುಕ್ಕಿಸುತ್ತೇವೆ’ ಎಂದಿದ್ದರು. ಅದರ ಬೆನ್ನಲ್ಲೆ ಉಮೇಶ್ಪಾಲ್ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಎನ್ಕೌಂಟರ್ ಮಾಡಲಾಗಿತ್ತು.