ನವ ದೆಹಲಿ: ಯುವ ಕಾಂಗ್ರೆಸ್ ಅಸ್ಸಾಂ ಘಟಕದ ಮಾಜಿ ಮುಖ್ಯಸ್ಥೆ ಅಂಕಿತಾ ದತ್ತಾ ದೂರಿನ ಅನ್ವಯ ದಾಖಲಿಸಲಾದ ಎಫ್ಐಆರ್ನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ (Srinivas BV) ಸಲ್ಲಿಸಿದ್ದ ಅರ್ಜಿಯನ್ನು ಅಸ್ಸಾಂನ ಗುವಾಹಟಿ ಹೈಕೋರ್ಟ್ ವಜಾಗೊಳಿಸಿದೆ. ಅಷ್ಟೇ ಅಲ್ಲ, ಶ್ರೀನಿವಾಸ್ ಬಿವಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲೂ ನಿರಾಕರಿಸಿದೆ. ಎರಡೂ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಿತ್ ಬೋರ್ತಕೂರ್ ಅವರಿದ್ದ ಪೀಠ ‘ಈ ಎಫ್ಐಆರ್ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಎಫ್ಐಆರ್ ರದ್ದುಗೊಳಿಸುವಂಥ ಮತ್ತು ನಿರೀಕ್ಷಣಾ ಜಾಮೀನು ಕೊಡುವಂಥ ಪ್ರಕರಣ’ ಇದಲ್ಲ ಎಂಬ ತೀರ್ಮಾನವನ್ನು ಹೊರಹಾಕಿದೆ.
ಯುವ ಕಾಂಗ್ರೆಸ್ ಅಸ್ಸಾಂ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಅವರು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಮತ್ತು ಉಸ್ತುವಾರಿ ಕಾರ್ಯದರ್ಶಿ ವರ್ಧನ್ ಯಾದವ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಅಷ್ಟೇ ಅಲ್ಲ ದಿಸ್ಪುರ ಪೊಲೀಸ್ ಸ್ಟೇಶನ್ನಲ್ಲಿ ದೂರು ದಾಖಲಿಸಿದ್ದರು. ಕಳೆದ 6ತಿಂಗಳಿಂದಲೂ ಶ್ರೀನಿವಾಸ್ ಬಿವಿ ಅವರಿಂದ ನಾನು ಕಿರುಕುಳಕ್ಕೆ ಒಳಗಾಗುತ್ತಿದ್ದೇನೆ. ಇತ್ತೀಚೆಗೆ ಛತ್ತೀಸ್ಗಢ್ನ ರಾಯ್ಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಸರ್ವಸದಸ್ಯರ ಸಮ್ಮೇಳನದಲ್ಲಿ ನನ್ನೊಂದಿಗೆ ಅವರು ಅನುಚಿತವಾಗಿ ವರ್ತಿಸಿದ್ದರು. ‘ವೋಡ್ಕಾ ಕುಡೀತಿಯಾ ಎಂದು ಕೇಳಿದ್ದರು’ ಅಷ್ಟೇ ಅಲ್ಲ, ತೋಳನ್ನು ಗಟ್ಟಿಯಾಗಿ ಹಿಡಿದುಕೊಂಡು, ‘ನನ್ನ ಬಗ್ಗೆ ಪಕ್ಷದ ವರಿಷ್ಠರಿಗೆ ಹೇಳಿದ್ದೇ ಆದಲ್ಲಿ, ನಿನ್ನ ರಾಜಕೀಯ ವೃತ್ತಿ ಜೀವನವನ್ನು ಹಾಳುಗೆಡವುತ್ತೇನೆ. ಮುಂದಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದೂ ಹೆದರಿಸಿದ್ದರು. ಅವರಿಂದ ನಾನು ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ. ಮಹಿಳೆ ಎಂಬ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಅಂಥ ಕಮೆಂಟ್ಗಳನ್ನು ಅವರು ನನ್ನ ವಿರುದ್ಧ ಮಾಡುತ್ತಿದ್ದಾರೆ’ ಎಂಬುದು ಅವರ ದೂರಿನ ಸಾರಾಂಶ. ಹೀಗೆ ಶ್ರೀನಿವಾಸ್ ಬಿವಿ ವಿರುದ್ಧ ಆರೋಪ ಮಾಡಿದ್ದ ಅಂಕಿತಾ ದತ್ತಾರನ್ನು ಕಾಂಗ್ರೆಸ್ ಈಗಾಗಲೇ ಪಕ್ಷದಿಂದ ಉಚ್ಚಾಟನೆ ಮಾಡಿದೆ.
ಶ್ರೀನಿವಾಸ್ ಬಿವಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ಎನ್.ಚೌಧರಿ ಅವರು‘ ಈ ಎಫ್ಐಆರ್ ದಾಖಲಿಸುವ ಹಿಂದೆ ಸಂಚು ಇದೆ. ಗುಪ್ತ ಉದ್ದೇಶವಿದೆ. ಅರ್ಜಿದಾರರ ಗೌರವ ಹಾಳು ಮಾಡಬೇಕೆಂದೇ ದೂರು ನೀಡಲಾಗಿದೆ. ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದರು. ಹಾಗೇ, ಪ್ರತಿವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಫುಕನ್ ಅವರು ’ ಅರ್ಜಿದಾರರು (ಶ್ರೀನಿವಾಸ್ ಬಿವಿ) ಅವರು ಈಗಾಗಲೇ ಕರ್ನಾಟಕದ ಬೆಂಗಳೂರಿನ ಸೆಷನ್ಸ್ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು (ಬಂಧನ ಪೂರ್ವ ಜಾಮೀನು) ಅರ್ಜಿ ಸಲ್ಲಿಸಿದ್ದರು. ಆದರೆ ಕೇಸ್ನ್ನು ಸಮಗ್ರ ಅಧ್ಯಯನ ಮಾಡಿದ ಆ ಕೋರ್ಟ್ ಶ್ರೀನಿವಾಸ್ ಬಿವಿಗೆ ಜಾಮೀನು ನಿರಾಕರಣೆ ಮಾಡಿದೆ’ ಎಂದು ತಿಳಿಸಿದ್ದರು. ಗುವಾಹಟಿ ಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ಮತ್ತು ಎಫ್ಐಆರ್ ರದ್ದತಿಗೆ ನಿರಾಕರಣೆ ಮಾಡಿದೆ. ರಾಜಕೀಯ ಪ್ರೇರಿತ ಎನ್ನುವುದಕ್ಕೆ ಸಾಕ್ಷಿಯಿಲ್ಲ ಎಂದಿದೆ.