ಶ್ರೀನಗರ: ಕಾಂಗ್ರೆಸ್ ತೊರೆದು ಈಗ ಜಮ್ಮು-ಕಾಶ್ಮೀರಕ್ಕೆ ಹೋಗಿ ಅಲ್ಲಿ ಹೊಸದಾದ ರಾಜಕೀಯ ಪಕ್ಷವನ್ನು ಕಟ್ಟಲು ನಿರ್ಧಾರ ಮಾಡಿರುವ ಗುಲಾಂ ನಬಿ ಆಜಾದ್ಗೆ ಉಗ್ರರಿಂದ ಜೀವ ಬೆದರಿಕೆ ಎದುರಾಗಿದೆ. ಗುಲಾಂ ನಬಿ ಆಜಾದ್ ಅವರು ಹೊಸದಾದ ರಾಷ್ಟ್ರೀಯ ಪಕ್ಷವನ್ನು ಹುಟ್ಟುಹಾಕಲು ನಿರ್ಧರಿಸಿದ್ದು, ಅದರ ಮೊದಲ ಘಟಕವನ್ನು ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ನೂತನ ಪಕ್ಷ ಪ್ರಾರಂಭದ ಭಾಗವಾಗಿ ಮಿಷನ್ ಕಾಶ್ಮೀರ್ ಶುರುವಿಟ್ಟುಕೊಂಡಿದ್ದು ಅಲ್ಲಿ ಸಾರ್ವಜನಿಕ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಱಲಿಗಳನ್ನು ಆಯೋಜಿಸುತ್ತಿದ್ದಾರೆ.
ಹೀಗೆ ಕಾಶ್ಮೀರದಲ್ಲಿ ಸಕ್ರಿಯವಾದ ಅವರಿಗೆ ಅವರಿಗೆ ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ ಅಂಗ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಉಗ್ರ ಸಂಘಟನೆ ಜೀವ ಬೆದರಿಕೆಯನ್ನೊಡ್ಡಿದೆ. ಗುಲಾಂ ನಬಿ ಆಜಾದ್ಗೆ ಬೆದರಿಕೆ ಹಾಕಿದ ಪೋಸ್ಟರ್ಗಳು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿವೆ. ಸದ್ಯ ಗುಲಾಂ ನಬಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಾಶ್ಮೀರದಲ್ಲಿ 2019ರಲ್ಲಿ ವಿಶೇಷ ಸ್ಥಾನಮಾನ ತೆಗೆದ ಬಳಿಕ ಹುಟ್ಟಿಕೊಂಡಿದ್ದು ಈ ರೆಸಿಸ್ಟೆನ್ಸ್ ಫ್ರಂಟ್. ಕಾಶ್ಮೀರದಲ್ಲಿ ಸಕ್ರಿಯವಾಗಿ ಹೋರಾಟ ನಡೆಸಲು ಲಷ್ಕರೆ ತೊಯ್ಬಾ ನಾಯಕರೇ ಈ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. 2020ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ ನಡೆದ ಹಲವು ದಾಳಿಗಳಲ್ಲಿ ಈ ‘ದಿ ರೆಸಿಸ್ಟೆನ್ಸ್ ಫ್ರಂಟ್ (TRF)’ ಪಾತ್ರವಿದೆ.
ಟಿಆರ್ಎಫ್ ಹೇಳೋದೇನು?
ಸಾಮಾಜಿಕ ಜಾಲತಾಣದಲ್ಲಿ ಗುಲಾಂ ನಬಿ ಆಜಾದ್ಗೆ ಬೆದರಿಕೆ ಹಾಕಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ಉಗ್ರ ಸಂಘಟನೆ ‘ಗುಲಾಂ ನಬಿ ಆಜಾದ್ ಇತ್ತೀಚೆಗೆ ಕಾಂಗ್ರೆಸ್ ತೊರೆದು, ಜಮ್ಮು-ಕಾಶ್ಮೀರ ರಾಜಕೀಯಕ್ಕೆ ಪ್ರವೇಶ ಮಾಡಿರುವದರ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡ ಇದೆ. ಇವೆಲ್ಲ ಬದಲಾವಣೆಗಳೂ ಕೇಂದ್ರ ಸರ್ಕಾರದ ಕಾರ್ಯಕತಂತ್ರಗಳೇ ಆಗಿವೆ. ಗುಲಾಂ ನಬಿ ಆಜಾದ್ ಕಾಂಗ್ರೆಸ್ ತೊರೆಯುವುದಕ್ಕೂ ಮೊದಲು ಅವರು ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ರನ್ನು ಭೇಟಿಯಾಗಿದ್ದಾರೆ. ಅವರೊಬ್ಬ ಬಿಜೆಪಿಯ ಏಜೆಂಟ್. ಅಷ್ಟೇ ಅಲ್ಲ, ಬಿಜೆಪಿ ತನ್ನ ರಾಜಕೀಯಕ್ಕಾಗಿ, ಇಲ್ಲಿಂದ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದೆ.
ರಾಹುಲ್ ಭಟ್ನನ್ನು ಕೊಂದಿದ್ದೇಕೆ?
ಇತ್ತೀಚೆಗೆ ಹತ್ಯೆಯಾದ ರಾಹುಲ್ ಭಟ್ ಬಗ್ಗೆಯೂ ಟಿಆರ್ಎಫ್ ತನ್ನ ಸೋಷಿಯಲ್ ಮೀಡಿಯಾ ಪೋಸ್ಟರ್ನಲ್ಲಿ ಉಲ್ಲೇಖ ಮಾಡಿದೆ. ರಾಹುಲ್ ಭಟ್ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ, ಆತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆ ನೇರ ಸಂಪರ್ಕದಲ್ಲಿದ್ದ ಎಂಬ ಬಗ್ಗೆ ನಮ್ಮ ಗುಪ್ತಚರ ಸಿಬ್ಬಂದಿ ಮಾಹಿತಿ ನೀಡಿದ್ದರು. ಇನ್ನೊಬ್ಬ ಕಾಶ್ಮೀರಿ ಹಿಂದುವನ್ನು ಕೊಲ್ಲಲೂ ಇದೇ ಕಾರಣ ಎಂದು ಹೇಳಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ಇನ್ನೆಂದೂ ಸ್ಥಾಪಿತವಾಗದು ಎಂದ ಗುಲಾಂ ನಬಿ ಆಜಾದ್