ನವ ದೆಹಲಿ: ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಇತ್ತೀಚೆಗೆ ಜಮ್ಮು-ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷನ ಸ್ಥಾನವನ್ನು ಅವರಿಗೆ ವಹಿಸಲಾಗಿತ್ತು. ಆದರೆ ಹುದ್ದೆಗೆ ಏರಿದ ಕೆಲವೇ ಹೊತ್ತಲ್ಲಿ ರಾಜೀನಾಮೆ ಕೊಟ್ಟಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವವನ್ನೇ ತೊರೆದಿದ್ದಾರೆ.
ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಗುಲಾಂ ನಬಿ ಆಜಾದ್, ‘ಕಾಂಗ್ರೆಸ್ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಹೊಗಳುಭಟ್ಟರು, ಅನನುಭವಿಗಳು ಹೆಚ್ಚಾಗುತ್ತಿದ್ದಾರೆ. ಈ ವಾತಾವರಣ ಹಿಂಸೆ ತರುತ್ತಿದೆ’ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್ನ ರಾಜಕೀಯ ಪ್ರಭಾವ ತಗ್ಗುತ್ತಿರುವುದಕ್ಕೆ, ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವುದಕ್ಕೆ ರಾಹುಲ್ ಗಾಂಧಿ ಅಪ್ರಬುದ್ಧತೆಯೇ ಕಾರಣ ಎಂದಿದ್ದಾರೆ.
‘ರಾಹುಲ್ ಗಾಂಧಿಯವರದ್ದು ಅಪ್ರಬುದ್ಧತೆ. ಶಿಕ್ಷೆಗೊಳಗಾದ ಶಾಸಕರು ಅಧಿಕಾರದಲ್ಲಿ ಮುಂದುವರಿಯುವಂತಿಲ್ಲ ಎಂಬ ಸುಪ್ರೀಂಕೋರ್ಟ್ನ ಆದೇಶವನ್ನು ನಿರಾಕರಿಸಿ, ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಯ ಪ್ರತಿಯನ್ನು ಮಾಧ್ಯಮಗಳ ಎದುರು ಹರಿದುಹಾಕಿದ್ದು ಅವರ ಬಾಲಿಶ ವರ್ತನೆಗೆ ಜ್ವಲಂತ ಉದಾಹರಣೆ. ಇದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇಡೀ ಕೇಂದ್ರ ಸರ್ಕಾರಕ್ಕೆ ಮುಜುಗರ ತಂದಿಟ್ಟಿತು. ಅಷ್ಟೇ ಅಲ್ಲ, 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗಲು ಇದೂ ಒಂದು ಮುಖ್ಯ ಕಾರಣವಾಯಿತು’ ಎಂದೂ ತಮ್ಮ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪ್ರಮುಖ ಹುದ್ದೆಗೆ ನೇಮಕವಾದ ಒಂದೇ ತಾಸಲ್ಲಿ ರಾಜೀನಾಮೆ ಕೊಟ್ಟ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್