ಕನೌಜ್: 13 ವರ್ಷದ ಹುಡುಗಿಯೊಬ್ಬಳು ಗಂಭೀರವಾಗಿ ಗಾಯಗೊಂಡು ನೆಲದ ಮೇಲೆ ಬಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದರೆ, ಸುತ್ತಲೂ ನಿಂತ ಏಳೆಂಟು ಜನ ಪುರುಷರು ಆ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು ಬಿಟ್ಟರೆ, ಆಕೆಯ ಸಹಾಯಕ್ಕೆ ಹೋಗಲಿಲ್ಲ. ಹೀಗೆ ರಕ್ತದ ಮಡುವಿನಲ್ಲಿ ಬಿದ್ದ ಹುಡುಗಿ ಸಹಾಯಕ್ಕೆ ಅಂಗಲಾಚುವುದು ಮತ್ತು ಆಕೆ ಸುತ್ತಲೂ ನಿಂತವರು ವಿಡಿಯೊ ಮಾಡಿಕೊಳ್ಳುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊ ನೋಡಿದವರೆಲ್ಲ ‘ಮಾನವೀಯತೆ ಇಲ್ಲದ ಜನ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೇ, ಇಂಥ ಕ್ರೌರ್ಯ ತುಂಬಿದ ಘಟನೆ ನಡೆದಿದ್ದು ಉತ್ತರ ಪ್ರದೇಶದ ಕನೌಜ್ನಲ್ಲಿ.
ಆ ಹುಡುಗಿ ಅರೆಬರೆ ಎಚ್ಚರದಲ್ಲಿ ಇದ್ದಳು. ತಲೆ ಸೇರಿ ಇಡೀ ದೇಹದ ಹಲವು ಕಡೆಗಳಲ್ಲಿ ಗಂಭೀರ ಗಾಯಗಳಾಗಿದ್ದವು. ಆಕೆಯನ್ನು ಅಲ್ಲಿಂದ ಎತ್ತಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ಮುಂದಾಗಲಿಲ್ಲ. ಒಂದು ತೊಟ್ಟು ನೀರು ಕುಡಿಸಲಿಲ್ಲ. ಪೊಲೀಸರಿಗೆ ಫೋನ್ ಮಾಡಿ ಎಂದು ಅವರಲ್ಲೇ ಒಬ್ಬ ಹೇಳಿದ, ‘ನನ್ನ ಬಳಿ ಪೊಲೀಸ್ ಅಧಿಕಾರಿ ನಂಬರ್ ಇದೆ’ ಎಂದು ಇನ್ನೊಬ್ಬ ಹೇಳಿದ. ಅಷ್ಟಾಗುತ್ತಿದ್ದರೂ ಉಳಿದವರು ಮೊಬೈಲ್ನಲ್ಲಿ ಆಕೆಯನ್ನು ಚಿತ್ರೀಕರಣ ಮಾಡುವುದನ್ನು ಮುಂದುವರಿಸಿದ್ದರು. ಕೊನೆಗೂ ಪೊಲೀಸರೇ ಅಲ್ಲಿಗೆ ಬಂದು ಹುಡುಗಿಯನ್ನು ಕಾಪಾಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬ ಬಾಲಕಿಯನ್ನು ತನ್ನ ತೋಳಿನಲ್ಲಿ ಎತ್ತಿಕೊಂಡು, ಆಟೋವೊಂದರಲ್ಲಿ ಮಲಗಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಪೊಲೀಸ್ ಅಧಿಕಾರಿ ಹೇಳೋದೇನು?
ಹುಡುಗಿ ಕನೌಜ್ನ ಗುರ್ಸಹೈಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಹಳ್ಳಿಯವಳು. ಹುಡುಗಿ ಮಧ್ಯಾಹ್ನದ ಹೊತ್ತಲ್ಲಿ ಪಿಗ್ಗಿ ಬ್ಯಾಂಕ್ ಖರೀದಿಗಾಗಿ ಹೊರಹೋಗಿದ್ದಳು. ಸಂಜೆಯಾದರೂ ವಾಪಸ್ ಬರದೆ ಇದ್ದಾಗ ಆಕೆಯ ಪಾಲಕರು ಹುಡುಕಿಕೊಂಡು ಹೋಗಿದ್ದರು. ಎಲ್ಲಿಯೂ ಕಾಣಿಸದಾಗ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟರಲ್ಲೇ ಸ್ಥಳೀಯರೂ ಹುಡುಗಿಯೊಬ್ಬಳು ಸಮೀಪದ ಸರ್ಕಾರಿ ಗೆಸ್ಟ್ ಹೌಸ್ ಹಿಂದೆ ರಕ್ತದ ಮಡುವಲ್ಲಿ ಬಿದ್ದಿರುವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ನೋಡಿದರೆ ಆಕೆಯ ಸ್ಥಿತಿ ಗಂಭೀರವಾಗಿತ್ತು. ಸದ್ಯ ಅವಳಿಗೆ ಕನೌಜ್ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವಳೇ ಖುದ್ದಾಗಿ ಹೇಳಿಕೆ ನೀಡುವವರೆಗೂ ಏನೂ ಹೇಳಲಾಗುವುದು. ಅತ್ಯಾಚಾರವಾದ ಬಗ್ಗೆ ಅವಳು ಹೇಳಿದರೆ ವೈದ್ಯಕೀಯ ತಪಾಸಣೆ ಮಾಡಿಸಲಾಗುವುದು ಎಂದು ಗುರ್ಸಹೈಗಂಜ್ ಠಾಣೆಯ ಮುಖ್ಯ ಪೊಲೀಸ್ ಅಧಿಕಾರಿ ಮನೋಜ್ ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ: Crime News | ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರ