Site icon Vistara News

ಆನ್​​ಲೈನ್​ನಲ್ಲಿ ಸ್ಮಾರ್ಟ್​ಫೋನ್​ ಆರ್ಡರ್​ ಮಾಡಿದ 16 ವರ್ಷದ ಹುಡುಗಿ; ಅವಸರದಲ್ಲಿ ರಕ್ತ ಮಾರಲು ಹೋಗಿದ್ದೇಕೆ?

SmartPhone

ಕೋಲ್ಕತ್ತ: ಹುಟ್ಟಿ ಮೂರ್ನಾಲ್ಕು ವರ್ಷಗಳಾಗುತ್ತಿದ್ದಾಗಲೇ ಮಕ್ಕಳು ಕೈಯಲ್ಲಿ ಮೊಬೈಲ್​ ಹಿಡಿದು ಅದರಲ್ಲಿ ಎಲ್ಲವನ್ನೂ ಆಪರೇಟ್​ ಮಾಡುವ ಕಾಲ ಇದು. ಅಪ್ಪ-ಅಮ್ಮನ ಕೈಯಲ್ಲಿರುವ ಮೊಬೈಲ್​​ ತಮಗೂ ಬೇಕೆಂದು ಮಕ್ಕಳು ರಚ್ಚೆ ಹಿಡಿದು ಪಡೆಯುತ್ತಾರೆ. ಇನ್ನು ಹೈಸ್ಕೂಲ್​/ಕಾಲೇಜಿಗೆ ಹೋಗುವವರಂತೂ ಬಿಡಿ, ಅವರಲ್ಲಿ ತಮಗೊಂದು ಮೊಬೈಲ್​ ಬೇಕೆಂಬ ತುಡಿತ ವಿಪರೀತವಾಗಿ ಇದ್ದೇ ಇರುತ್ತದೆ. ಮನೆಯಲ್ಲಿ ಹಠ ಮಾಡುತ್ತಾರೆ. ಅವರು ಕೊಡಿಸಿದರೆ ಆಯಿತು. ಒಮ್ಮೆ ಮನೆಯವರು ಮೊಬೈಲ್​ ಕೊಡಿಸಿಲ್ಲ ಎಂದರೆ, ಹೇಗಾದರೂ ಅದನ್ನು ಖರೀದಿಸಬೇಕು ಎಂದು ಸ್ವಯಪ್ರಯತ್ನದಲ್ಲಿ ತೊಡಗುತ್ತಾರೆ.

ಹಾಗೇ ಪಶ್ಚಿಮ ಬಂಗಾಳದಲ್ಲಿ 16ವರ್ಷದ ಹುಡುಗಿಯೊಬ್ಬಳು ಸ್ಮಾರ್ಟ್​ಫೋನ್​ ಖರೀದಿ ಮಾಡುವುದಕ್ಕೋಸ್ಕರ ಅತ್ಯಂತ ಅಪಾಯಕಾರಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಳು. ತನ್ನ ಸ್ನೇಹಿತರ ಬಳಿಯೆಲ್ಲ ಮೊಬೈಲ್​ ಇರುವುದನ್ನು ನೋಡಿದ್ದ ಈಕೆ, ತನ್ನ ಸಂಬಂಧಿಯೊಬ್ಬರ ಮೊಬೈಲ್ ಮೂಲಕ ಆನ್​ಲೈನ್​ನಲ್ಲಿ ಒಂದು ಸ್ಮಾರ್ಟ್​ ಫೋನ್​ ಆರ್ಡರ್ ಮಾಡಿದ್ದಳು. ಭಾನುವಾರ (ಅಕ್ಟೋಬರ್​ 16) ಆಕೆ ಆರ್ಡರ್​ ಮಾಡಿದ್ದರೆ, ಗುರುವಾರ (ಅ.29) ಅದು ಮನೆಗೆ ಡೆಲಿವರಿ ಆಗುವುದಿತ್ತು. ಆ ಫೋನ್​ ಬೆಲೆ 9000 ರೂಪಾಯಿ. ಈ ಹುಡುಗಿಯೋ, ಕೈಯಲ್ಲಿ ಅಷ್ಟು ಹಣ ಇಲ್ಲದೆ ಇದ್ದರೂ ಸ್ಮಾರ್ಟ್​ಫೋನ್​ ಆರ್ಡರ್​ ಮಾಡಿಕೊಂಡಿದ್ದಳು. ಹೀಗಾಗಿ ಫೋನ್​ ಡೆಲಿವರಿ ಆಗುವುದಕ್ಕೂ ಮುನ್ನ ಅಷ್ಟು ಹಣ ಹೊಂದಿಸಬೇಕಿತ್ತು.

ಆಗ ಹುಡುಗಿಗೆ ಹೊಳೆದಿದ್ದು ರಕ್ತದಾನ ಮಾಡುವ ಐಡಿಯಾ. ದಕ್ಷಿಣ ದಿನಜಪುರದ ಕಾರ್ಡಾ ನಿವಾಸಿಯಾಗಿರುವ ಈ ಹುಡುಗಿ ಬಲೂರ್ಘಾಟ್​​ನಲ್ಲಿರುವ ಜಿಲ್ಲಾಸ್ಪತ್ರೆಗೆ ತೆರಳಿ ‘ನಾನು ರಕ್ತ ಕೊಡುತ್ತೇನೆ, ಅದಕ್ಕೆ ಪ್ರತಿಯಾಗಿ ನನಗೆ ಹಣ ಬೇಕು’ ಎಂದು ಕೇಳಿದ್ದಾಳೆ. ಕಾರಣ ಕೇಳಿದ್ದಕ್ಕೆ ಮೊದಲು ‘ನನ್ನ ಅಣ್ಣನಿಗೆ ಅಪಘಾತವಾಗಿದೆ. ಅವನ ಚಿಕಿತ್ಸೆಗೆ ಹಣ ಹೊಂದಿಸಬೇಕು. ಹಾಗಾಗಿ ರಕ್ತ ಮಾರುತ್ತಿದ್ದೇನೆ’ ಎಂದು ಹೇಳಿದ್ದಳು. ಆದರೂ ಅಲ್ಲಿನ ಸಿಬ್ಬಂದಿಗೆ ಹುಡುಗಿಯ ನಡೆ ವಿಚಿತ್ರ ಎನ್ನಿಸಿ, ಮತ್ತಷ್ಟು ವಿಚಾರಣೆ ಮಾಡಿದ್ದಾರೆ. ಆಗಲೇ ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ.

16ವರ್ಷದ ಹುಡುಗಿ ರಕ್ತ ಕೊಡುತ್ತೇನೆ ಎಂದು ಬಂದು ಅನುಮಾನಾಸ್ಪದವಾಗಿ ವರ್ತಿಸಿದಾಗ ಆ ಆಸ್ಪತ್ರೆಯವರು ಮಕ್ಕಳ ಆರೈಕೆ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿದ್ದರು. ಅಲ್ಲಿಗೆ ಬಂದ ಮಕ್ಕಳ ಆರೈಕೆ ಕೇಂದ್ರದ ಸದಸ್ಯೆ ರೀಟಾ ಮೆಹ್ತೋ, ಹುಡುಗಿಯ ಬಳಿ ವಿವರ ಕೇಳಿದ್ದಾರೆ. ಸ್ವಲ್ಪ ಕೌನ್ಸಿಲಿಂಗ್​ ಮಾಡಿ ‘ರಕ್ತದಾನ ಯಾಕೆ ಮಾಡುತ್ತಿದ್ದೀಯಾ?, ನಿನಗೆ ಹಣ ಯಾಕೆ ಬೇಕು?’ ಎಂದು ಪ್ರಶ್ನಿಸಿದ್ದಾರೆ. ಆಗ ಹುಡುಗಿ, ರೀಟಾ ಬಳಿ ಎಲ್ಲ ವಿಚಾರವನ್ನೂ ಹೇಳಿಕೊಂಡಿದ್ದಾಳೆ. ನಂತರ ಆಕೆಯನ್ನು ಪಾಲಕರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: Smartphone| ದೀಪಾವಳಿ ಬಳಿಕ ಸ್ಮಾರ್ಟ್‌ಫೋನ್‌ ದರದಲ್ಲಿ ಏರಿಕೆ ನಿರೀಕ್ಷೆ

Exit mobile version