ನವ ದೆಹಲಿ: ಇತ್ತೀಚೆಗಷ್ಟೇ ಏರ್ ಇಂಡಿಯಾಕ್ಕೆ ಎರಡು ಬಾರಿ ದಂಡ ವಿಧಿಸಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಈಗ ಇನ್ನೊಂದು ವಿಮಾನಯಾನ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಸಲ ದಂಡ ಬಿದ್ದಿದ್ದು ಗೋ ಫಸ್ಟ್ ಸಂಸ್ಥೆಗೆ. ಈ ತಿಂಗಳ ಪ್ರಾರಂಭದಲ್ಲಿ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಮಾನ 50 ಪ್ರಯಾಣಿಕರನ್ನು ಬಿಟ್ಟು ಹೋಗಿತ್ತು. ಅದೇ ಕೇಸ್ಗೆ ಸಂಬಂಧಪಟ್ಟಂತೆ ಡಿಜಿಸಿಎ ಈಗ ಕ್ರಮ ಕೈಗೊಂಡಿದೆ.
ಜನವರಿ 9ರಂದು ಗೋ ಫಸ್ಟ್ ಹೀಗೊಂದು ಎಡವಟ್ಟು ಮಾಡಿತ್ತು. ಬೆಂಗಳೂರು ಏರ್ಪೋರ್ಟ್ನಿಂದ ದೆಹಲಿಗೆ ನಿಗದಿತ ಸಮಯಕ್ಕಿಂತಲೂ ಮುಂಚೆಯೇ ಟೇಕ್ ಆಫ್ ಆಗಿತ್ತು. ಹೀಗಾಗಿ ಸುಮಾರು 55 ಪ್ರಯಾಣಿಕರಿಗೆ ವಿಮಾನ ತಪ್ಪಿತ್ತು. ಚೆಕ್ ಇನ್ ಆಗಿ, ಬೋರ್ಡಿಂಗ್ ಪಾಸ್ ಪಡೆದು ಏರ್ಪೋರ್ಟ್ ಒಳಗೆ ಈ ಪ್ರಯಾಣಿಕರು ತಲುಪಿದ್ದರು. ಬಳಿಕ ಏರ್ಪೋರ್ಟ್ನಿಂದ ವಿಮಾನ ಇರುವ ಜಾಗಕ್ಕೆ ಒಟ್ಟು 4ಬಸ್ಗಳಲ್ಲಿ ಎಲ್ಲರನ್ನೂ ಕರೆದೊಯ್ಯಲಾಗಿತ್ತು. ಆದರೆ 55 ಪ್ರಯಾಣಿಕರು ಇಲ್ಲಿ ಬಸ್ಗೆ ಕಾಯುತ್ತಿದ್ದಾಗಲೇ ಅತ್ತ ವಿಮಾನ ಹಾರಿಹೋಗಿತ್ತು. ಇದರಿಂದ ಕ್ರೋಧಗೊಂಡ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಮಗಾದ ಕೆಟ್ಟ ಅನುಭವ ಹೇಳಿಕೊಂಡಿದ್ದರು.
ಈ ಘಟನೆಯನ್ನು ಗಮನಕ್ಕೆ ತೆಗೆದುಕೊಂಡ ಡಿಜಿಸಿಎ ಅಧಿಕಾರಿಗಳು ಗೋ ಫಸ್ಟ್ಗೆ ಶೋಕಾಸ್ ನೋಟಿಸ್ ಕೊಟ್ಟಿದ್ದರು. ಜನವರಿ 25ರಂದು ಉತ್ತರಿಸಿದ್ದ ಗೋ ಫಸ್ಟ್, ‘ಟರ್ಮಿನಲ್ ಕೋ ಆರ್ಡಿನೇಟರ್ (ಟಿಸಿ), ಕಮರ್ಷಿಯಲ್ ಸಿಬ್ಬಂದಿ ಮತ್ತು ವಿಮಾನ ಸಿಬ್ಬಂದಿ ನಡುವಿನ ಅಸಮರ್ಪಕ ಸಂವಹನ ಮತ್ತು ಸಮನ್ವಯತೆ ಇಲ್ಲದೆ ಈ ಪ್ರಮಾದವಾಗಿದೆ’ ಎಂದು ಹೇಳಿತ್ತು. ಇಂಡಿಗೋ ಶೋಕಾಸ್ ನೋಟಿಸ್ಗೆ ಉತ್ತರ ಕೊಟ್ಟ ಬೆನ್ನಲ್ಲೇ 10 ಲಕ್ಷ ರೂಪಾಯಿ ದಂಡ ಬಿದ್ದಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಮಾರ್ಗಸೂಚಿ-ನಿಯಮಗಳನ್ನು ಉಲ್ಲಂಘಿಸಿದ್ದರಿಂದಲೇ ದಂಡ ವಿಧಿಸಿದ್ದಾಗಿ ತಿಳಿಸಿದೆ.