ಬೆಂಗಳೂರು: ಬೆಂಗಳೂರಿನಿಂದ ಮಾಲ್ಡೀವ್ಸ್ಗೆ ಹೋಗುತ್ತಿದ್ದ ಗೋ ಫಸ್ಟ್ ವಿಮಾನ (Go First Flight) ಕೊಯಂಬತ್ತೂರಿನಲ್ಲಿ ತುರ್ತು ಭೂಸ್ಪರ್ಶವಾಗಿದೆ. ಈ ವಿಮಾನದಲ್ಲಿ 92 ಪ್ರಯಾಣಿಕರು ಇದ್ದರು. ಬೆಂಗಳೂರು ಏರ್ಪೋರ್ಟ್ನಿಂದ ಹೊರಟು ಸುಮಾರು ಒಂದು ತಾಸು ಹಾರಾಡಿದ ನಂತರ ವಾಯುಮಾರ್ಗ ಮಧ್ಯೆಯಲ್ಲಿ ವಿಮಾನ ಎಂಜಿನ್ ಉಷ್ಣತೆ ಮಿತಿಮೀರಿ, ಎಚ್ಚರಿಕೆ ಗಂಟೆ ಬಾರಿಸಿದೆ. ವಿಮಾನದೊಳಗೆ ಹೊಗೆಯೂ ಕಾಣಿಸಿಕೊಂಡಿತ್ತು. ಬಳಿಕ ವಿಮಾನವನ್ನು ಕೊಯಂಬತ್ತೂರ್ ಏರ್ಪೋರ್ಟ್ನಲ್ಲಿ ಲ್ಯಾಂಡ್ ಮಾಡಲಾಗಿದೆ. ಎಲ್ಲ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ ಎಂದು ಗೋ ಫಸ್ಟ್ ವಕ್ತಾರ ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
ಇನ್ನು ಎಂಜಿನ್ ವಿಪರೀತವಾಗಿ ಹೀಟ್ ಆಗಿ ಕೊಯಂಬತ್ತೂರಿನಲ್ಲಿ ಲ್ಯಾಂಡ್ ಆದ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ, ಗೋ ಫಸ್ಟ್ ಇಂಜಿನಿಯರ್ಗಳ ತಂಡ ಪರೀಕ್ಷೆ ಮಾಡುತ್ತಿದೆ. ಎಲ್ಲ ಸರಿಯಾಗಿದೆ ಎಂದು ಖಚಿತವಾದ ವಿನಃ ಮತ್ತೆ ಟೇಕ್ ಆಫ್ ಆಗುವುದಿಲ್ಲ ಎಂದೂ ವಕ್ತಾರರು ಮಾಹಿತಿ ನೀಡಿದ್ದರು.
ಇನ್ನು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ‘ಈ ವಿಮಾನ ಕೊಯಂಬತ್ತೂರ್ ಬಳಿ ಹಾರಾಡುತ್ತಿದ್ದಾಗ ಒಂದು ಎಚ್ಚರಿಕೆ ಬೆಲ್ ಕೇಳಿಸಿತು. ಆಗ ಪೈಲಟ್ ಕೊಚ್ಚಿನ್ ಏರ್ಟ್ರಾಫಿಕ್ ಕಂಟ್ರೋಲ್ಗೆ ಕರೆ ಮಾಡಿ, ವಿಷಯ ತಿಳಿಸಿದರು. ಹೀಗಾಗಿ ಅವರಿಗೆ ಕೊಯಂಬತ್ತೂರ್ ಏರ್ಪೋರ್ಟ್ನಲ್ಲಿ ಲ್ಯಾಂಡ್ ಮಾಡುವಂತೆ ಏರ್ ಟ್ರಾಫಿಕ್ ಕಂಟ್ರೋಲ್ ಸೂಚನೆ ನೀಡಿತು. ವಿಮಾನದಲ್ಲಿ ಎಂಜಿನ್ ಹೀಟ್ ಆಗಿದೆ ಎಂಬ ಮಾಹಿತಿ ಏರ್ಪೋರ್ಟ್ ಆಡಳಿತಕ್ಕೆ ಸಿಕ್ಕಿದ್ದರಿಂದ, ವಿಮಾನ ನಿಲ್ದಾಣದಲ್ಲೂ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಯನ್ನೂ ಕರೆಸಲಾಗಿತ್ತು. ಆದರೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಹೆಚ್ಚೇನೂ ಸಮಸ್ಯೆ ಆಗಲಿಲ್ಲ ಎಂದು ತಿಳಿಸಿದೆ. ಹಾಗೇ, ತನಿಖೆಗೂ ಆದೇಶಿಸಿದೆ.
ಇದನ್ನೂ ಓದಿ: ಗೋ ಫಸ್ಟ್‌ನ 2 ಫ್ಲೈಟ್‌ಗಳಲ್ಲಿ ತಾಂತ್ರಿಕ ದೋಷ; ಒಂದು ವಾಪಸ್ ಹೋಯ್ತು, ಮತ್ತೊಂದು ದೆಹಲಿಗೆ ಬಂತು