ಭೋಪಾಲ್: ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹಿಂದು ಪದ ಅಶ್ಲೀಲ ಎಂದು ಹೇಳಿರುವುದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ಅದರಲ್ಲೂ ರಾಜ್ಯ ಬಿಜೆಪಿ ನಾಯಕರು ಸತೀಶ್ ವಿರುದ್ಧ ನಿನ್ನೆಯಿಂದಲೂ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಆ ಸಾಲಿಗೆ ಈಗ ಮಧ್ಯಪ್ರದೇಶ ಬಿಜೆಪಿ ನಾಯಕ, ಅಲ್ಲಿನ ಗೃಹ ಸಚಿವ ನರೋತ್ತಮ ಮಿಶ್ರಾ ಸೇರಿದ್ದಾರೆ. ಕರ್ನಾಟಕ ಕಾಂಗ್ರೆಸ್ ನಾಯಕನ ಹೇಳಿಕೆಗೆ ಇಡೀ ಪಕ್ಷ, ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಮಿಶ್ರಾ ಆಗ್ರಹಿಸಿದ್ದಾರೆ. ಅಷ್ಟೇ
ಅಲ್ಲ, ಈ ಬಗ್ಗೆ ತಾವು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯುವುದಾಗಿಯೂ ಹೇಳಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಸಚಿವ ನರೋತ್ತಮ ಮಿಶ್ರಾ, ಈ ಹಿಂದೆ ರಾಹುಲ್ ಗಾಂಧಿ ರಾಜಸ್ಥಾನದ ಱಲಿಯಲ್ಲಿ ಮಾತನಾಡಿದ ವೇಳೆ ರಾಹುಲ್ ಗಾಂಧಿ ಹಿಂದು ಮತ್ತು ಹಿಂದುತ್ವದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಈಗ ಸತೀಶ್ ಜಾರಕಿಹೊಳಿ ಹಿಂದು ಎಂದರೆ ಕೆಟ್ಟಪದ ಎಂದಿದ್ದಾರೆ. ಈ ಬಗ್ಗೆ ಕೂಡಲೇ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ. ‘ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲೂ ಹಿಂದುತ್ವವನ್ನು ಅವಹೇಳನ ಮಾಡಲಾಗಿದೆ. ಯಾರಿಗೆಲ್ಲ ಹಿಂದು ಮತ್ತು ಹಿಂದುತ್ವದಿಂದ ಇಲ್ಲಿ ಸಮಸ್ಯೆಯಾಗುತ್ತಿದೆಯೋ, ಅವರೆಲ್ಲ ಪಾಕಿಸ್ತಾನಕ್ಕೆ ಹೋಗಬಹುದು. ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಇಂಥ ಜನರ ಅಗತ್ಯತೆ ಇದೆ’ ಎಂದು ಮಿಶ್ರಾ ಹೇಳಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ನಿಪ್ಪಾಣಿಯಲ್ಲಿ ಮಾತನಾಡುವ ವೇಳೆ ಹಿಂದು ಧರ್ಮದ ಬಗ್ಗೆ ಮಾತನಾಡಿದ್ದರು. ಹಿಂದು ಪದಕ್ಕೆ ಅತ್ಯಂತ ಕೀಲು ಅರ್ಥವಿದೆ. ಅದನ್ನು ಕೇಳಿದರೆ ನಾಚಿಕೆಯಾಗುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಇದು ನನ್ನ ವೈಯಕ್ತಿಕ ಹೇಳಿಕೆಯಲ್ಲ, ಎಂದು ಒಂದಷ್ಟು ವಿಕಿಪಿಡಿಯಾ ದಾಖಲೆಗಳು, ಲೇಖನಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ದೊಡ್ಡ ವಿವಾದ ಸೃಷ್ಟಿಸಿದೆ.
ಇದನ್ನೂ ಓದಿ: Satish Jarakiholi | ಹಿಂದು ಬಗ್ಗೆ ನಾನು ಹೇಳಿದ್ದೇ ಸರಿ, ಕ್ಷಮೆ ಕೇಳೋದಿಲ್ಲ ಎಂದ ಸತೀಶ್ ಜಾರಕಿಹೊಳಿ