ಪಣಜಿ: ಗೋವಾ ಕಾಂಗ್ರೆಸ್‌ನಲ್ಲಿ ಬಂಡಾಯದ ಗಾಳಿ ಬೀಸುತ್ತಿರುವ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ಮುಖಂಡ ಮೈಕೆಲ್ ಲೋಬೋ ಅವರನ್ನು ಗೋವಾ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರು ಬಿಜೆಪಿಯೊಂದಿಗೆ ಸೇರಿಕೊಂಡು, ಪಕ್ಷದೊಳಗೆ ಅಸ್ಥಿರತೆ ಸೃಷ್ಟಿಸಿ, ಶಾಸಕರು ಬಂಡಾಯ ಏಳಲು ಕಾರಣರಾಗಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇನ್ನು ಮುಂದೆ ಅವರು ವಿಪಕ್ಷ ನಾಯಕನ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಎಐಸಿಸಿ ವೀಕ್ಷಕ, ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಸಂಚಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗಂಬರ್ ಕಾಮತ್ ಕೈವಾಡವೂ ಇದೆ ಎಂದು ತಿಳಿಸಿದ್ದಾರೆ.
ಮೈಕಲ್ ಲೋಬೋ ಮತ್ತು ದಿಗಂಬರ್ ಕಾಮತ್ ಇಬ್ಬರೂ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದು, ಆ ಪಕ್ಷ ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ. ದಿಗಂಬರ್ ಕಾಮತ್ ವಿರುದ್ಧ ಹಲವು ಪ್ರಕರಣಗಳು ಇವೆ. ಅವುಗಳಿಂದೆಲ್ಲ ಪಾರಾಗುವ ಅನಿವಾರ್ಯತೆ ಅವರಿಗೆ ಇದೆ. ಹಾಗಾಗಿ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇನ್ನೊಂದೆಡೆ ಲೋಬೋ, ಅಧಿಕಾರ ಮತ್ತು ಹುದ್ದೆಗಾಗಿ ಕೇಸರಿ ಪಾಳಯದತ್ತ ಹೆಜ್ಜೆ ಇಟ್ಟಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಗೋವಾದಲ್ಲಿಯೂ ಪ್ರತಿಪಕ್ಷವನ್ನು ಸಂಪೂರ್ಣವಾಗಿ ಕೊನೆಗಾಣಿಸಲು ಮುಂದಾಗಿದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಗೋವಾ ಕಾಂಗ್ರೆಸ್‌ನಲ್ಲಿ ಬಂಡಾಯ, ಕೆಲ ಶಾಸಕರು ಬಿಜೆಪಿಯತ್ತ
ಬಿಜೆಪಿಯಿಂದ ದೊಡ್ಡ ಮೊತ್ತದ ಹಣದ ಆಫರ್ ಕಾಂಗ್ರೆಸ್ ಶಾಸಕರಿಗೆ ಬರುತ್ತಿದೆ. ಆ ಮೊತ್ತ ಕೇಳಿ ನನಗೇ ಶಾಕ್ ಆಯಿತು. ಬಿಜೆಪಿ ಏನೇ ಮಾಡಿದರೂ ನಮ್ಮ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲಾಗಲಿ, ನಾಶ ಮಾಡಲಾಗಲಿ ಸಾಧ್ಯವಿಲ್ಲ ಎಂದು ಹೇಳಿರುವ ದಿನೇಶ್ ಗುಂಡೂರಾವ್, ʼಬಿಜೆಪಿಯ ಆಮಿಷಕ್ಕೆ ಒಳಗಾಗಿ, ಅಧಿಕಾರಕ್ಕಾಗಿ ಆ ಪಕ್ಷಕ್ಕೆ ಸೇರುತ್ತಿರುವ ಲೋಬೋ ಮತ್ತು ಕಾಮತ್‌ಗೆ ಜನರೇ ಪಾಠ ಕಲಿಸಲಿದ್ದಾರೆ ಎಂದೂ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ವರದಿ ಹೊರಬೀಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ಮೈಕಲ್ ಲೋಬೋ, “ಹಾಗೇನೂ ಇಲ್ಲ. ಕಾಂಗ್ರೆಸ್‌ನಿಂದ ಯಾರೂ ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ. ಇದೆಲ್ಲ ವದಂತಿಗಳು ಸುಮ್ಮನೆ ಹಬ್ಬುತ್ತಿವೆ” ಎಂದು ತಿಳಿಸಿದ್ದರು. ಆದರೆ ಅವರೇ ಈಗ ವಜಾಗೊಂಡಿದ್ದಾರೆ.
ಇದನ್ನೂ ಓದಿ: ಗೋವಾ ಕಾಂಗ್ರೆಸ್ ಶಾಸಕರಿಗೆ ಬಿಗ್ ಆಫರ್!: ಸಿ.ಟಿ.ರವಿ ಮಾತು ನಿಜವಾಗುವ ಸಮಯ ಬಂದಿದೆಯಾ?