Site icon Vistara News

Hijab Row: ಮಕ್ಕಳಿಗೆ ಹಿಜಾಬ್‌ ತೊಡಿಸಿ ಮಸೀದಿಗೆ ಕರೆದುಕೊಂಡು ಹೋದ ಪ್ರಾಂಶುಪಾಲ ಸಸ್ಪೆಂಡ್!

Goa School Students

Goa School Principal Takes Students On School Trip To Mosque, Suspended

ಪಣಜಿ: ಕರ್ನಾಟಕ ಸೇರಿ ಹಲವು ರಾಜ್ಯಗಳ ಶಾಲೆಗಳಲ್ಲಿ ಹಿಜಾಬ್‌ ವಿವಾದ (Hijab Row) ಆಗಾಗ ಭುಗಿಲೇಳುತ್ತದೆ. ಇದರ ಬೆನ್ನಲ್ಲೇ, ಗೋವಾದಲ್ಲಿ ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯರಿಗೆ ಹಿಜಾಬ್‌ ತೊಡಿಸಿ, ಮಸೀದಿಗೆ ಕರೆದುಕೊಂಡು ಹೋಗಿದ್ದು, ಭಾರಿ ಪ್ರತಿಭಟನೆ ಬಳಿಕ ಅವರನ್ನು ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಮಸೀದಿಯಲ್ಲಿ ಧಾರ್ಮಿಕ ಆಚರಣೆ ಮಾಡಿದ ಫೋಟೊಗಳು ವೈರಲ್‌ ಆಗುತ್ತಲೇ ಗೋವಾದಲ್ಲಿ ಭಾರಿ ವಿವಾದ ಭುಗಿಲೆದ್ದಿದೆ.

ವಾಸ್ಕೋದಲ್ಲಿರುವ ಕೇಶವ ಸ್ಮೃತಿ ಹೈಯರ್‌ ಸೆಕೆಂಡರ್‌ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿನಿಯರು ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಸೇಷನ್‌ (SIO) ಆಹ್ವಾನದ ಮೇರೆಗೆ ಇತ್ತೀಚೆಗೆ ಮಸೀದಿಗೆ ಭೇಟಿ ನೀಡಿದ್ದಾರೆ. ವಿದ್ಯಾರ್ಥಿನಿಯರು ಮಸೀದಿಗೆ ತೆರಳಿದಾಗ ಅವರು ತಲೆಯನ್ನು ದುಪಟ್ಟಾದಿಂದ ಮುಚ್ಚಿಕೊಂಡಿದ್ದಾರೆ ಹಾಗೆಯೇ, ಮಸೀದಿ ಪ್ರವೇಶಿಸುವ ಮುನ್ನ ತಲೆ, ಕೈ, ಕಾಲು ತೊಳೆದುಕೊಂಡು ಹೋಗುವ “ವಾಜು” ಎಂಬ ಧಾರ್ಮಿಕ ವಿಧಿವಿಧಾನ ಅನುಸರಿಸಿದ್ದಾರೆ. ಇದು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಎದುರು ಪ್ರತಿಭಟನೆ ನಡೆಸಿದ ಕಾರಣ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.

“ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಸೇಷನ್‌ ಕೃತ್ಯವು ಖಂಡನೀಯವಾಗಿದೆ. ನಾವು ಇಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ. ಇದು ಸ್ಕೂಲ್‌ ಜಿಹಾದ್‌ ಹುನ್ನಾರವಾಗಿದೆ. ಹಿಂದುಗಳು ಹಾಗೂ ವಿಶ್ವ ಹಿಂದು ಪರಿಷತ್‌ ಇಂತಹ ಘಟನೆಗಳನ್ನು ಸಹಿಸುವುದಿಲ್ಲ” ಎಂದು ವಿಎಚ್‌ಪಿ ದಕ್ಷಿಣ ಗೋವಾ ಜಂಟಿ ಕಾರ್ಯದರ್ಶಿ ಸಂಜು ಕೊರಗಾಂವ್‌ಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಹಿಂದು ಸಂಘಟನೆಗಳು ಕೂಡ ಘಟನೆಯನ್ನು ಖಂಡಿಸುವ ಜತೆಗೆ ಪ್ರತಿಭಟನೆ ನಡೆಸಿವೆ.

ಇದನ್ನೂ ಓದಿ: ಮದುವೆಗೂ ಮುನ್ನ ಕಾಲೇಜು ಪ್ರಾಂಶುಪಾಲೆ, ಈಗ ಮೋಸ್ಟ್​ವಾಂಟೆಡ್​ ಕ್ರಿಮಿನಲ್​; ಈಕೆಯ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ!

ವಿದ್ಯಾರ್ಥಿಗಳು ಹೇಳುವುದೇ ಬೇರೆ…

ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಬಲವಂತವಾಗಿ ಹಿಜಾಬ್‌ ತೊಡಿಸಿ, ಅವರನ್ನು ಮಸೀದಿಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಆರೋಪವನ್ನು ವಿದ್ಯಾರ್ಥಿನಿಯರು ತಿರಸ್ಕರಿಸಿದ್ದಾರೆ. “ನಮಗೆ ಯಾರೂ ಬಲವಂತ ಮಾಡಿಲ್ಲ. ನಾವಾಗಿಯೇ ಮಸೀದಿಗೆ ಹೋಗಿದ್ದೇವೆ” ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಹಾಗೆಯೇ, ಪ್ರಾಂಶುಪಾಲರ ಅಮಾನತು ಖಂಡಿಸಿ ವಿದ್ಯಾರ್ಥಿನಿಯರು ಶಾಲೆಯ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ವಿದ್ಯಾರ್ಥಿನಿಯರು ಇಷ್ಟು ಹೇಳಿದರೂ ಪ್ರಾಂಶುಪಾಲರ ಅಮಾನತು ರದ್ದಾಗಿಲ್ಲ ಎಂದು ತಿಳಿದುಬಂದಿದೆ. ಸೌಹಾರ್ದತೆ, ಬೇರೆ ಧರ್ಮದ ಆಚರಣೆ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಮಸೀದಿಗೆ ಕರೆದುಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ.

Exit mobile version