ಶ್ರೀಕಾಕುಲಂ: ಆಂಧ್ರಪ್ರದೇಶದಲ್ಲಿ ಅಸಾನಿ ಚಂಡಮಾರುತದ (Cyclone Asani) ಪ್ರಭಾವ ಅತ್ಯಂತ ಹೆಚ್ಚಾಗಿದ್ದು, ಕಳೆದ ಎರಡು ಮೂರು ದಿನಗಳಿಂದಲೂ ಗಾಳಿ-ಮಳೆ ಹೆಚ್ಚಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರವೂ ಜೋರಾಗಿದೆ. ಈ ಮಧ್ಯೆ ಒಂದು ಅಚ್ಚರಿಯ ಘಟನೆ ನಡೆದಿದೆ. ಅಬ್ಬರದ ಅಲೆಗಳ ಜತೆ ಚಿನ್ನದ ಬಣ್ಣದ ರಥವೊಂದು ತೇಲುತ್ತ ಬಂದಿದೆ.
ಆ ಸುಂದರವಾದ, ಬಂಗಾರದ ಬಣ್ಣದ ರಥವನ್ನು ನೋಡಿದ ಸ್ಥಳೀಯ ಜನರು ಅಲೆಗಳ ಮಧ್ಯೆಯೇ ಹೋಗಿ ಅದನ್ನು ನೀರಿನಿಂದ ಆಚೆಗೆ ತಂದಿದ್ದಾರೆ. ರಥ ನೀರಿನಲ್ಲಿ ತೇಲುತ್ತ ಬರುವ, ಜನರು ಅದನ್ನು ಎಳೆದು ತರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಅಂದಹಾಗೇ, ಇದು ನಡೆದದ್ದು ಶ್ರೀಕಾಕುಲಂ ಜಿಲ್ಲೆಯಲ್ಲಿರುವ ಸುನ್ನಿಪಲ್ಲಿ ಸಮುದ್ರದ ಬಂದರು ಪ್ರದೇಶದಲ್ಲಿ. ಈ ಬಂಗಾರದ ಬಣ್ಣದ ರಥ ಬೇರೆ ಯಾವುದೋ ದೇಶದಿಂದ ಬಂದಿರಬಹುದು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಅಲ್ಲದೆ ಸ್ಥಳೀಯ ಆಡಳಿತಕ್ಕೂ ಮಾಹಿತಿ ನೀಡಲಾಗಿದ್ದು, ಅದರೊಂದಿಗೆ ಗುಪ್ತಚರ ಇಲಾಖೆಗೆ ಮತ್ತು ಉನ್ನತಾಧಿಕಾರಿಗಳಿಗೆ ಕೂಡ ವಿಷಯ ತಿಳಿಸಿದ್ದೇವೆ ಎಂದು ನೌಪಡಾದ ಸಬ್ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ. ಮ್ಯಾನ್ಮಾರ್, ಮಲೇಷಿಯಾ, ಥೈಲ್ಯಾಂಡ್ ಅಥವಾ ಇಂಡೋನೇಷಿಯಾ ಈ ದೇಶಗಳಲ್ಲಿ ಯಾವುದಾದರೂ ದೇಶದಿಂದ ರಥ ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಸಾಗರದ ಅಲೆಗಳೊಟ್ಟಿಗೆ ಏನೋ ಒಂದು ವಸ್ತು ದಡದತ್ತಲೇ ಬರುತ್ತಿರುವುದನ್ನು ಮೊದಲು ನೋಡಿದ್ದು ಕೆಲವು ಮೀನುಗಾರರು ಮತ್ತು ಸ್ಥಳೀಯ ಹಳ್ಳಿಯವರು. ಹತ್ತಿರವಾಗುತ್ತಿದ್ದಂತೆ ಇದೊಂದು ರಥ ಎಂಬುದನ್ನು ಗುರುತಿಸಿದ ಅವರು ಧೈರ್ಯ ಮಾಡಿ ಸಮುದ್ರದ ಕಡೆಗೆ ಹೋಗಿ ಎಳೆದುಕೊಂಡು ಬಂದಿದ್ದಾರೆ. ಅವರು ರಥ ಎಳೆಯಲು ಹೋದಾಗಲೂ ಅಲೆಗಳ ಮಟ್ಟ ಹೆಚ್ಚಾಗಿಯೇ ಇತ್ತು. ಸಾಗರದಲ್ಲಿ ದೊಡ್ಡದೊಡ್ಡ ಅಲೆಗಳು ಏಳುತ್ತಿದ್ದವು. ಇವರೆಲ್ಲ ಹೇಳುವ ಪ್ರಕಾರ, ಇದ್ಯಾವುದೇ ದೇಶದಿಂದ ಬಂದ ರಥವಲ್ಲ. ಯಾವುದೋ ಸಮುದ್ರದ ಬೀಚ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿರಬೇಕು. ಬಹುಶಃ ಅವರು ಬಳಸಲು ತೆಗೆದುಕೊಂಡು ಬಂದಿದ್ದ ರಥವಾಗಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ | Cyclone Asani | ಪಥ ಬದಲಿಸುತ್ತಿದೆ ಚಂಡಮಾರುತ: ಆಂಧ್ರ ಪ್ರದೇಶದಲ್ಲಿ ರೆಡ್ ಅಲರ್ಟ್