ತಿರುವನಂತಪುರಂ: ಚಿನ್ನ ಕಳ್ಳಸಾಗಣೆ (Gold Smuggling) ಮಾಡುತ್ತಿದ್ದ ಏರ್ ಇಂಡಿಯಾದ ಸಿಬ್ಬಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ: Customs fraud | ಬ್ಯಾಂಕಾಕ್‌ನಿಂದ 16 iPhone ತಂದು ಸುಂಕ ತಪ್ಪಿಸಲೆತ್ನಿಸಿದವ ಏರ್‌ಪೋರ್ಟಲ್ಲಿ ಸಿಕ್ಕಿಬಿದ್ದ
ಕೇರಳದ ವಯನಾಡ್ ಮೂಲದ ಶಫಿ ಬಂಧಿತ ಆರೋಪಿ. ಆತ ಬಹ್ರೇನ್-ಕೋಜಿಕೋಡ್-ಕೊಚ್ಚಿಯ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಆತ ಒಟ್ಟು 1487 ಗ್ರಾಂ ಚಿನ್ನವನ್ನು ತನ್ನ ಕೈಗಳಿಗೆ ಕಟ್ಟಿಕೊಂಡಿದ್ದ. ಪೂರ್ತಿ ತೋಳಿನ ಶರ್ಟ್ ಧರಿಸಿ, ಬಂಗಾರ ಕಾಣದಂತೆ ಮುಚ್ಚಿಟ್ಟುಕೊಳ್ಳಲಾಗಿತ್ತು. ಆತ ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದಾಗಿ ಕೊಚ್ಚಿಯಲ್ಲಿ ಆತನನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಆಗ ಶಮಿ ಕೈಗಳಲ್ಲಿ ಚಿನ್ನ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಬುಧವಾರ ಸಿಂಗಾಪುರದಿಂದ ತಮಿಳುನಾಡಿನ ಚೆನ್ನೈ ವಿಮಾಣ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರು 3.32 ಕೋಟಿ ರೂ. ಮೌಲ್ಯದ 6.8ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಆ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರೂ ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಎರಡೂ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ.