ನವ ದೆಹಲಿ: ರಾಷ್ಟ್ರಪತಿ ಚುನಾವಣೆ ಯಲ್ಲಿ ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಭರ್ಜರಿ ಕಸರತ್ತು ನಡೆಯುತ್ತಿದೆ. ಇಂದು ದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ಮಧ್ಯಾಹ್ನ 3ಗಂಟೆಗೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆಯೂ ನಡೆಯಲಿದೆ. ಆದರೆ ಪ್ರತಿಪಕ್ಷಗಳು ಯಾರನ್ನು ತಮ್ಮ ಅಭ್ಯರ್ಥಿಯನ್ನಾಗಿ ಮಾಡಬಹುದು ಎಂಬುದು ದೊಡ್ಡ ಕುತೂಹಲ. ಶರದ್ ಪವಾರ್ ತಾವು ರಾಷ್ಟ್ರಪತಿ ಆಗೋದಿಲ್ಲ ಎಂದು ಬಿಟ್ಟಿದ್ದಾರೆ. ಟಿಆರ್‌ಎಸ್‌ನ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಸಭೆಗೇ ಬರೋದಿಲ್ಲ ಎಂದು ಹೇಳಿದ್ದಾರೆ. ಹೀಗಿರುವಾಗ ಒಂದು ಅಚ್ಚರಿಯ ಹೆಸರು ಪ್ರತಿಪಕ್ಷಗಳ ಅಂಗಳದಿಂದ ಕೇಳಿಬರುತ್ತಿದೆ. ಅದು ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿಯವರದ್ದು. ಅವರನ್ನು ಪ್ರತಿಪಕ್ಷಗಳು ಈಗಾಗಲೇ ಸಂಪರ್ಕಿಸಿ, ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಪ್ರಸ್ತಾವನೆಯನ್ನು ಇಟ್ಟಿವೆ. ಅವರು ಉತ್ತರಿಸಲು ಸ್ವಲ್ಪ ಸಮಯ ಕೇಳಿದ್ದಾರೆ ಎಂದು ಬಲವಾದ ಮೂಲಗಳಿಂದ ತಿಳಿದುಬಂದಿದೆ. ಇಂದಿನ ಸಭೆಯಲ್ಲಿ ಈ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದೂ ಹೇಳಲಾಗಿದೆ.
ಗೋಪಾಲಕೃಷ್ಣ ಗಾಂಧಿ ಯುಪಿಎ ಒಕ್ಕೂಟದ ರಾಜಕಾರಣಿ. ಇವರು ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳ ರಾಜ್ಯಪಾಲರೂ ಆಗಿದ್ದರು. ಐಎಎಸ್ ಅಧಿಕಾರಿಯೂ ಆಗಿದ್ದ ಗೋಪಾಲಕೃಷ್ಣ ಗಾಂಧಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಹೈಕಮಿಷನರ್ ಆಗಿಯೂ ಕೆಲಸ ಮಾಡಿದ್ದಾರೆ. 2017ರ ರಾಷ್ಟ್ರಪತಿ ಚುನಾವಣೆ ಹೊತ್ತಿನಲ್ಲಿ ಇವರನ್ನು ಯುಪಿಎ ಒಕ್ಕೂಟ ಉಪ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ ಆಗ ವೆಂಕಯ್ಯ ನಾಯ್ಡು ವಿರುದ್ಧ ಸೋತಿದ್ದರು. ಅಂದು ಗೋಪಾಲಕೃಷ್ಣ ಗಾಂಧಿ 244 ಮತ ಪಡೆದಿದ್ದರೆ ವೆಂಕಯ್ಯ ನಾಯ್ಡು 516 ಮತಗಳನ್ನು ಗಳಿಸಿದ್ದರು.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ | ದೇವೇಗೌಡ ಆಗ್ತಾರಾ ಅಭ್ಯರ್ಥಿ? ಪ್ರತಿಪಕ್ಷಗಳ ಸಭೆಯಲ್ಲಿ ಎಚ್‌ಡಿಡಿ, ಎಚ್‌ಡಿಕೆ
ರಾಷ್ಟ್ರಪತಿ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸುವ ಸಲುವಾಗಿ ಮಮತಾ ಬ್ಯಾನರ್ಜಿ ಇಂದು ಸಭೆ ಕರೆದಿದ್ದಾರೆ. ಅದರಲ್ಲಿ ಪಾಲ್ಗೊಳ್ಳುವಂತೆ 22 ಪ್ರತಿಪಕ್ಷಗಳ ನಾಯಕರಿಗೆ ಅವರು ಪತ್ರ ಬರೆದಿದ್ದರು. ಎನ್‌ಸಿಪಿ ನಾಯಕ ಶರದ್ ಪವಾರ್‌ರನ್ನು ಮಂಗಳವಾರ ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡುವಾಗ ಗೋಪಾಲಕೃಷ್ಣ ಗಾಂಧಿಯವರ ಬಗ್ಗೆಯೂ ಚರ್ಚಿಸಿದ್ದಾರೆ. ಶರದ್ ಪವಾರ್ ಕೂಡ ಗೋಪಾಲ ಕೃಷ್ಣ ಗಾಂಧಿ ಹೆಸರನ್ನು ತೆಗೆದುಹಾಕಿಲ್ಲ. ಸಲಹೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ʻಮಮತಾʼ ಸಭೆಗೆ ಸರ್ವ ಸಜ್ಜು; ಬರಲ್ಲ ಎಂದ ಟಿಆರ್‌ಎಸ್, ಆಪ್, ಬಿಜೆಡಿ