Site icon Vistara News

ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಲು ಒಪ್ಪದ ಗಾಂಧಿ ಮೊಮ್ಮಗ; ದೇಶ ಒಪ್ಪುವವರನ್ನು ಆರಿಸಲು ಸಲಹೆ

Gopalkrishna Gandhi

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ (President Election) ಎಲ್ಲರೂ ಒಟ್ಟಾಗಿ ಅಭ್ಯರ್ಥಿಯನ್ನೊಬ್ಬರನ್ನು ಕಣಕ್ಕೆ ಇಳಿಸುವ ಪ್ರಯತ್ನದಲ್ಲಿ ಪ್ರತಿಪಕ್ಷಗಳೆಲ್ಲ ತೊಡಗಿವೆ. ಅಭ್ಯರ್ಥಿ ಯಾರು? ಎಂದು ಪ್ರಶ್ನೆ ಬಂದಾಗ ಮೊದಲಿಗೆ ಕೇಳಿಬಂದಿದ್ದು ಶರದ್‌ ಪವಾರ್‌. ಆದರೆ ಶರದ್‌ ಪವಾರ್‌ ತಾವು ರಾಷ್ಟ್ರಪತಿ ಹುದ್ದೆ ರೇಸ್‌ನಲ್ಲಿ ಇರಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಮೇಲೆ, ಪ್ರತಿಪಕ್ಷಗಳ ಪ್ರಮುಖರೆಲ್ಲ ಸೇರಿ, ಮಹಾತ್ಮ ಗಾಂಧಿ ಮೊಮ್ಮಗ, ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿಯವರ ಬಳಿ ಪ್ರಸ್ತಾಪ ಇಟ್ಟಿದ್ದರು. ಅಂದರೆ ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗುವಂತೆ ಮನವಿ ಮಾಡಿದ್ದರು. ಆದರೆ ಅವರೀಗ ಈ ಆಫರ್‌ನ್ನು ಒಪ್ಪಿಕೊಳ್ಳಲಿಲ್ಲ. ಪ್ರೆಸಿಡೆಂಟ್‌ ಎಲೆಕ್ಷನ್‌ಗೆ ನಿಲ್ಲುವುದಿಲ್ಲ ಎಂದು ಪ್ರಕಟಣೆಯನ್ನು ಹೊರಡಿಸಿದ್ದಾರೆ.

ʼದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ನನ್ನನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಿದ್ದಕ್ಕೆ ಕೃತಜ್ಞತೆಗಳು. ಆದರೆ ಪ್ರತಿಪಕ್ಷಗಳ ಆಯ್ಕೆಯ ರಾಷ್ಟ್ರಪತಿ ಅಭ್ಯರ್ಥಿ, ಈ ರಾಷ್ಟ್ರ ಒಮ್ಮತದಿಂದ ಒಪ್ಪಿಕೊಳ್ಳುವಂತಿರಬೇಕು. ಆ ವಿಚಾರಕ್ಕೆ ಬಂದರೆ ನನಗಿಂತಲೂ ಉತ್ತಮರು, ಸಮರ್ಥರು ಇದ್ದಾರೆಂದು ನನಗೆ ಅನ್ನಿಸುತ್ತದೆ. ಅವರನ್ನು ಪರಿಗಣಿಸಿʼ ಎಂದು ಗೋಪಾಲಕೃಷ್ಣ ಗಾಂಧಿ ಹೇಳಿದ್ದಾರೆ. ಅಷ್ಟೇ ಅಲ್ಲ, ʼಪ್ರತಿಪಕ್ಷಗಳ ಅಭ್ಯರ್ಥಿಯಾದವರು ಎಲ್ಲ ಪಕ್ಷಗಳ ಮಧ್ಯೆ ಒಗ್ಗಟ್ಟು ಬಲಪಡಿಸುವಂತಿರಬೇಕು. ಡಾ. ರಾಜೇಂದ್ರ ಪ್ರಸಾದ್‌ ಅವರು ಮೊಟ್ಟಮೊದಲಿಗೆ ಈ ಹುದ್ದೆಗೇರುವ ಮೂಲಕ ಅದನ್ನು ಉದ್ಘಾಟಿಸಿದರು. ಅಂಥ ಅತ್ಯಮೂಲ್ಯ ಸ್ಥಾನಕ್ಕೆ ಅಷ್ಟೇ ಅರ್ಹತೆಯುಳ್ಳವರು ಏರಲಿʼ ಎಂದೂ ಆಶಿಸಿದ್ದಾರೆ.

ಜುಲೈ 18ಕ್ಕೆ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಹುಡುಕುವ ಯತ್ನದಲ್ಲಿರುವ ಪ್ರತಿಪಕ್ಷಗಳು ಒಟ್ಟಾಗಿವೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಈಗಾಗಲೇ ಒಂದು ಪ್ರತಿಪಕ್ಷಗಳ ಸಭೆಯಾಗಿದೆ. ಜೂ.21ಕ್ಕೆ ಮತ್ತೊಂದು ಸಭೆ ನಡೆಯಲಿದೆ. ಒಟ್ಟು 17 ವಿಪಕ್ಷಗಳು ಸೇರಿ ಒಬ್ಬರನ್ನು ಕಣಕ್ಕಿಳಿಸಲು ಸಿದ್ಧತೆ ಜೋರಾಗಿದೆ.

ಇದನ್ನೂ ಓದಿ: ವಿಸ್ತಾರ Explainer: ರಾಷ್ಟ್ರಪತಿ ಚುನಾವಣೆ 2022- ಯಾರ ಮತಕ್ಕೆ ಎಷ್ಟು ಬೆಲೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

Exit mobile version