ನವ ದೆಹಲಿ: ಪ್ರತಿವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ಆದರೆ ಈ ಸಲದಿಂದ ಭಾರತದಲ್ಲಿ ಫೆ.14ನ್ನು ‘ಗೋವುಗಳನ್ನು ಅಪ್ಪಿಕೊಳ್ಳುವ ದಿನ’ (Cow Hug Day) ಎಂದು ಆಚರಿಸುವಂತೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅನಿಮಲ್ ವೆಲ್‌ಫೇರ್ ಬೋರ್ಡ್ (Animal Welfare Board) ಅಧಿಸೂಚನೆ ಹೊರಡಿಸಿದೆ.
ಇದೀಗ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಈ ವಿಷಯವನ್ನು ಉದ್ಯಮಿ ಗೌತಮ್ ಅದಾನಿಯವರಿಗೆ ಲಿಂಕ್ ಮಾಡಿಕೊಂಡು, ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷವನ್ನು ವ್ಯಂಗ್ಯ ಮಾಡಿದ್ದಾರೆ. ಬಿಜೆಪಿಗರ ಪಾಲಿಗೆ ಗೌತಮ್ ಅದಾನಿಯವರೇ ಪವಿತ್ರ ಗೋವು ಎಂದು ಟೀಕಿಸಿದ್ದಾರೆ. ‘ಬಿಜೆಪಿಯವರು ತಮ್ಮ ಪವಿತ್ರ ಗೋವಾದ ಗೌತಮ್ ಅದಾನಿಯನ್ನು ಅಪ್ಪಿಕೊಂಡು, ಉಳಿದ ಹಸುಗಳನ್ನೆಲ್ಲ ನಮಗೆ ಬಿಟ್ಟಿದ್ದಾರೆ. ನಾವು ಫೆ.14ರ ಪ್ರೇಮಿಗಳ ದಿನದಂದು ಬಿಜೆಪಿಯವರು ಬಿಟ್ಟ ಹಸುಗಳನ್ನು ತಬ್ಬಿಕೊಳ್ಳಬೇಕು’ ಎಂದು ಹೇಳಿರುವ ಸಂಜಯ್ ರಾವತ್ ‘ಗೋಮಾತೆಯನ್ನು ಪೂಜಿಸಲು, ಅದನ್ನು ಅಪ್ಪಿಕೊಳ್ಳಲು ಯಾವುದೇ ಒಂದು ನಿರ್ದಿಷ್ಟ ದಿನ ಬೇಕಿಲ್ಲ’ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Cow Hug Day: ಪ್ರೇಮಿಗಳ ದಿನದಂದು ‘ಗೋವುಗಳನ್ನು ಅಪ್ಪುವ ದಿನ’ ಆಚರಿಸಿ, ಅನಿಮಲ್ ವೆಲ್‌ಫೇರ್ ಬೋರ್ಡ್ ನೋಟಿಸ್
ಗೌತಮ್ ಅದಾನಿ ಷೇರು ಕುಸಿತವನ್ನು ಪ್ರತಿಪಕ್ಷಗಳು ಆರ್ಥಿಕ ಹಗರಣ ಎಂದು ಕರೆದಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮತ್ತಿತರ ಪಕ್ಷಗಳ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಜಂಟಿ ಸಂಸದೀಯ ಸಮಿತಿಯಿಂದ ಅಥವಾ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ, ಸಮಿತಿ ರಚಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಬಜೆಟ್ ಅಧಿವೇಶನದಲ್ಲೂ ಕೂಡ ಇದೇ ವಿಷಯವನ್ನೇ ಇಟ್ಟುಕೊಂಡು ಕೇಂದ್ರಸರ್ಕಾರ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.