Site icon Vistara News

ಕೋವಿಡ್​ 19 ನಿಯಂತ್ರಣ ಲಸಿಕೆಯಿಂದ ಆಗುವ ಸಾವುಗಳಿಗೆ ಸರ್ಕಾರ ಹೊಣೆಯಲ್ಲ; ಸುಪ್ರೀಂಕೋರ್ಟ್​ಗೆ ಕೇಂದ್ರದ ಅಫಿಡವಿಡ್​

Government not liable for deaths related to vaccine Says Centre

ನವ ದೆಹಲಿ: ಕೋವಿಡ್​​ 19 ಲಸಿಕೆಗಳಿಂದ ಆಗುವ ದುಷ್ಪರಿಣಾಮಗಳಿಗೆ ಸರ್ಕಾರವನ್ನು ಹೊಣೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಅಫಿಡಿವಿಟ್​ ಸಲ್ಲಿಸಿದೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಭಾರತದಲ್ಲಿ ನಾಗರಿಕರಿಗೆ ಪ್ರಮುಖವಾಗಿ ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳು ಕೊರೊನಾವನ್ನು ನಿಯಂತ್ರಣ ಮಾಡುತ್ತವೆ ಎಂಬ ಮಾತುಗಳೊಂದಿಗೆ, ಕೊರೊನಾ ರೋಗ ನಿಯಂತ್ರಣಕ್ಕೆ ನೀಡುವ ಲಸಿಕೆಗಳು ಹೃದಯಾಘಾತ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಇವು ದೇಹಕ್ಕೆ ಉಂಟು ಮಾಡಿದ ದುಷ್ಪರಿಣಾಮದಿಂದ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಕಳೆದ ವರ್ಷ ಇಬ್ಬರು ಯುವತಿಯರು ಕೋವಿಡ್​​​ 19 ಲಸಿಕೆ ತೆಗೆದುಕೊಂಡ ಕೆಲ ದಿನಗಳ ನಂತರ ಮೃತಪಟ್ಟಿದ್ದರು. ಆ ಇಬ್ಬರು ಯುವತಿಯರ ತಂದೆ-ತಾಯಿ (ಬೇರೆಬೇರೆ ಪ್ರಕರಣ ಇದು) ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ‘ಕೋವಿಡ್​​​ 19 ನಿಯಂತ್ರಣ ಲಸಿಕೆ ಬಳಿಕವೇ ಸಾವು ಸಂಭವಿಸಿದೆ. ಈ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು. ಲಸಿಕೆ ತೆಗೆದುಕೊಂಡ ಬಳಿಕ ಅದರಿಂದ ದೇಹದ ಮೇಲೆ ಏನಾದರೂ ದುಷ್ಪರಿಣಾಮ ಆಗುತ್ತಿದ್ದರೆ (ಪ್ರತಿರಕ್ಷಣೆ ನಂತರ ಉಂಟಾಗುವ ಪ್ರತಿಕೂಲತೆ -AEFI), ಅದನ್ನು ಆದಷ್ಟು ಬೇಗ ಪತ್ತೆ ಮಾಡಲು ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡುವ ಸಂಬಂಧ ಪ್ರೊಟೊಕಾಲ್​ ಸಿದ್ಧಪಡಿಸಲು ಪರಿಣತ ವೈದ್ಯರನ್ನೊಳಗೊಂಡ ವೈದ್ಯಕೀಯ ಮಂಡಳಿ ರಚಿಸಬೇಕು. ಅಷ್ಟೇ ಅಲ್ಲ, ಸಾವಿಗೆ ಸರ್ಕಾರಗಳು ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದ್ದರು.

ಅರ್ಜಿಗಳ ವಿಚಾರಣೆ ಕೈಗತ್ತಿಕೊಂಡಿರುವ ಸುಪ್ರೀಂಕೋರ್ಟ್​, ಅಫಿಡವಿಟ್​ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಪ್ರೀಂಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಿದೆ. ‘ಲಸಿಕೆಗಳಿಂದ ಉಂಟಾಗುವ ಪ್ರತಿಕೂಲತೆ, ದುಷ್ಪರಿಣಾಮಗಳಿಂದ ಸಾವು ಸಂಭವಿಸುವುದು ತೀರ ಅಪರೂಪ. ಅದಕ್ಕೆ ಸರ್ಕಾರವನ್ನು ಹೊಣೆ ಮಾಡಿ, ಪರಿಹಾರ ಕೊಡುವಂತೆ ಹೇಳುತ್ತಿರುವುದು ಕಾನೂನು ಬದ್ಧ ಎನ್ನಿಸುತ್ತಿಲ್ಲ’ ಎಂದು ಹೇಳಿದೆ. ‘ಇದುವರೆಗೆ ಲಸಿಕೆಯಿಂದಾದ ದುಷ್ಪರಿಣಾಮದಿಂದ ಆದ ಮರಣ ಒಂದು ಮಾತ್ರ ಎಂದು ರಾಷ್ಟ್ರೀಯ ಎಇಎಫ್​ಐ ಸಮಿತಿ ತಿಳಿಸಿದೆ. ಈ ಇಬ್ಬರು ಯುವತಿಯರ ಸಾವಿನ ಬಗ್ಗೆ ನಮ್ಮ ಸಂತಾಪವಿದೆ. ಆದರೆ ಇದು ಲಸಿಕೆಯಿಂದ ಆಗಿದ್ದಲ್ಲ. ಲಸಿಕೆ ಸಂಬಂಧಿತ ದುಷ್ಪರಿಣಾಮಗಳಿಂದ ಯಾರಾದರೂ ದೈಹಿಕವಾಗಿ ಗಾಯಗೊಂಡರೆ ಮತ್ತು ಮರಣ ಹೊಂದಿದರೆ ಅವರಿಗೆ ಸರ್ಕಾರಗಳು ಪರಿಹಾರ ಕೊಡಲು ಸಾಧ್ಯವಿಲ್ಲ. ಆದರೆ ಕಾನೂನಿನಲ್ಲಿ ಅಗತ್ಯ ಪರಿಹಾರಗಳು ಖಂಡಿತ ಇವೆ. ಅಂಥವರು ಸಿವಿಲ್​ ಕೋರ್ಟ್​ಗೆ ಹೋಗಬಹುದು. ಕಾನೂನಾತ್ಮಕವಾಗಿ ಪರಿಹಾರ ಪಡೆಯಬಹುದು’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಕೇಸ್​​ನಲ್ಲಿ ಮೊದಲ ಅರ್ಜಿದಾರ ರಚನಾ ಗಂಗು. ಇವರ ಮಗಳು 2021ರ ಮೇ 29ರಂದು ಮೊದಲ ಡೋಸ್​ ಲಸಿಕೆ ಪಡೆದಿದ್ದಳು. ಅದಾದ ಬಳಿಕ ಅನಾರೋಗ್ಯಕ್ಕೀಡಾಗಿ ಜೂ.19ರಂದು ನಿಧನಳಾಗಿದ್ದಳು. ಎರಡನೇ ಅರ್ಜಿದಾರ ವೇಣುಗೋಪಾಲ್​ ಗೋವಿಂದನ್​ ಅವರ ಪುತ್ರಿ ಎಂ.ಎಸ್​ಸಿ ವಿದ್ಯಾರ್ಥಿನಿ 2021ರ ಜೂನ್​ 18ರಂದು ಮೊದಲ ಡೋಸ್​ ಕೊವಿಶೀಲ್ಡ್​ ಲಸಿಕೆ ಪಡೆದಿದ್ದಳು. ಬಳಿಕ ಅದೇ ವರ್ಷ ಜುಲೈ 10ರಂದು ಸಾವನ್ನಪ್ಪಿದ್ದಳು.

ಇದನ್ನೂ ಓದಿ: Anocovax: ಭಾರತದಲ್ಲಿ ಪ್ರಾಣಿಗಳಿಗೂ ಬಂತು ಕೊವಿಡ್‌ 19 ಲಸಿಕೆ; ಕೃಷಿ ಸಚಿವರಿಂದ ಬಿಡುಗಡೆ

Exit mobile version