ನವ ದೆಹಲಿ: 15 ವರ್ಷಗಳಿಗೂ ಹೆಚ್ಚು ಹಳತಾದ, ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರ ಅನ್ವಯ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳ, 15 ವರ್ಷಕ್ಕೂ ಹಳತಾದ ವಾಹನಗಳು ಇದೇ ವರ್ಷ (2023) ಏಪ್ರಿಲ್ 1ರಿಂದ ಸಂಚಾರ ನಿಲ್ಲಿಸಿ, ಗುಜರಿ ಸೇರಲಿವೆ. ಅವುಗಳ ನೋಂದಣಿ ರದ್ದಾಗಲಿದೆ. ರಾಜ್ಯ ನಿಗಮಗಳು, ಸಾರಿಗೆ ಇಲಾಖೆಗಳ ಬಸ್ಗಳು ಮತ್ತು ಇತರ ವಾಹನಗಳಿಗೂ ಈ ನಿಯಮ ಅನ್ವಯ ಆಗಲಿದೆ.
ಇನ್ನು ವಿಶೇಷ ಉದ್ದೇಶಕ್ಕಾಗಿ ಬಳಸುವ ವಾಹನಗಳು ಅಂದರೆ ದೇಶದ ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸುವ ಶಸ್ತ್ರಸಜ್ಜಿತ ವಾಹನಗಳು, ಆಂತರಿಕ ಭದ್ರತೆ ಮತ್ತು ಕಾನೂನು-ಸುವ್ಯವಸ್ಥೆ ರಕ್ಷಣೆ ಸಂಬಂಧ ಇರುವ ವಾಹನಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಅಂದರೆ 15 ವರ್ಷಕ್ಕಿಂತಲೂ ಹಳೆಯದಾಗಿದ್ದರೂ ಅವು ಗುಜರಿಗೆ ಸೇರುವುದಿಲ್ಲ ಎಂದು ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.
ವಾಯುಮಾಲಿನ್ಯ, ಶಬ್ದಮಾಲಿನ್ಯ ತಡೆಯುವ ಜತೆಗೆ ಆಟೋ ಮೊಬೈಲ್ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, 2021ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಈ ವಾಹನಗಳ ಗುಜರಿ ನೀತಿ ಘೋಷಿಸಿತ್ತು. 2022ರ ಏಪ್ರಿಲ್ನಿಂದ ಜಾರಿ ಬರಬೇಕಿದ್ದ ಈ ಯೋಜನೆ ಹಲವು ಕಾರಣಗಳಿಂದ ಅನುಷ್ಠಾನಗೊಂಡಿರಲಿಲ್ಲ. ಆದರೆ ಪ್ರಸಕ್ತ ಬಾರಿ ಕೇಂದ್ರ ಸರ್ಕಾರ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಮುಂದಡಿ ಇಟ್ಟಿದೆ. ಇತ್ತೀಚೆಗಷ್ಟೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತೊಮ್ಮೆ ಗುಜರಿ ನೀತಿ ಅನುಷ್ಠಾನದ ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಶೀಘ್ರದಲ್ಲೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದೂ ಹೇಳಿದ್ದರು. ಅಂತೆಯೇ ಈಗ ನೋಟಿಫಿಕೇಶನ್ ಹೊರಡಿಸಲಾಗಿದ್ದು, ‘ಎಲ್ಲ ಸರ್ಕಾರಿ ವಾಹನಗಳ ಪ್ರಾಥಮಿಕ ನೋಂದಣಿ ದಿನಾಂಕದಿಂದ ಪರಿಗಣಿಸಿ, 15 ವರ್ಷಕ್ಕೂ ಹೆಚ್ಚು ಹಳೆಯದಾದವುಗಳ ನೋಂದಣಿಯನ್ನು ಸ್ಕ್ರ್ಯಾಪಿಂಗ್ ಯೋಜನೆಯಡಿ ರದ್ದುಗೊಳಿಸಬೇಕು’ ಎಂದು ಸೂಚಿಸಿದೆ.
ಇನ್ನು ಹಳತಾದ ವಾಹನಗಳ ಫಿಟ್ನೆಸ್ ಪರೀಕ್ಷೆ ಮಾಡಲಾಗುವುದು. ಕಾರ್ಯಕ್ಷಮತೆಯಲ್ಲಿ ವಿಫಲಗೊಳ್ಳುವ ವಾಹನಗಳು ಗುಜರಿ ಸೇರಲಿವೆ. ವಾಹನಗಳು ಹಳತಾದಂತೆ ಅವುಗಳಿಂದ ಹೊರಸೂಸುವ ಹೊಗೆಯೂ ಜಾಸ್ತಿ. ಶಬ್ದವೂ ಹೆಚ್ಚು. ಹೀಗೆ ಹಳೇ ವಾಹನಗಳ ಸಂಚಾರವನ್ನೇ ರದ್ದುಗೊಳಿಸಿದರೆ ವಾಯುಮಾಲಿನ್ಯ ತಡೆಯಬಹುದು. ಜತೆಗೆ ಶಬ್ದಮಾಲಿನ್ಯ ಕಡಿಮೆಯಾಗುತ್ತದೆ. ಇನ್ನೊಂದು ಮುಖ್ಯ ಅಂಶವೆಂದರೆ ಆಟೋ ಮೊಬೈಲ್ ಕ್ಷೇತ್ರ ಇನ್ನಷ್ಟು ಪ್ರಗತಿ ಕಾಣುತ್ತದೆ. ಹಳದನ್ನು ಬದಿಗೊತ್ತಿ, ಹೊಸ ವಾಹನಗಳನ್ನು ಖರೀದಿಸುವ ಪ್ರಮಾಣ ಜಾಸ್ತಿಯಾದರೆ ಅದು ಸಹಜವಾಗಿಯೇ ಆಟೋ ಮೊಬೈಲ್ ವಲಯಕ್ಕೆ ಲಾಭ. ಇನ್ನೊಂದೆಡೆ ಗುಜರಿಗೆ ಬೀಳುವ ವಾಹನಗಳ ಕೆಲವು ಭಾಗಗಳು ಬೇರೆ ಉಪಯೋಗಕ್ಕೆ ಬರುವುದರಿಂದ, ಕಚ್ಚಾವಸ್ತುಗಳು ಅಗ್ಗದಲ್ಲಿ ಸಿಕ್ಕಂತಾಗುತ್ತದೆ.
ಇದನ್ನೂ ಓದಿ: Viral news | ಐದು ಟನ್‌ಗಳ ಈ ಬೃಹತ್ ರುದ್ರವೀಣೆ ತಯಾರಾದದ್ದು ಕಸದಿಂದ!