ಗುವಾಹಟಿ: ಮಹಾರಾಷ್ಟ್ರದ ಶಿವಸೇನೆಯಿಂದ ಬಂಡಾಯವೆದ್ದ ಶಾಸಕರೆಲ್ಲ ಮೊದಲು ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ಗೆ ಹೋಗಿ ನೆಲೆಸಿದ್ದರು. ಅಲ್ಲಿಂದ ಅಸ್ಸಾಂನ ಗುವಾಹಟಿಯಲ್ಲಿರುವ ಹೋಟೆಲ್‌ಗೆ ಹೋಗಿ ತಂಗಿದ್ದಾರೆ. ಶಿವಸೇನೆ ಶಾಸಕರು ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೇ ಹೋಗಿ ತಂಗುತ್ತಿದ್ದಾರೆ. ಅಲ್ಲಿಗೆ ಬಿಜೆಪಿಯೇ ಮುಂದಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ಅಸ್ಥಿರಗೊಳಿಸುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿಗಳು ಆರೋಪಿಸುತ್ತಲೇ ಇವೆ. ಅಷ್ಟೇ ಅಲ್ಲ, ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಇದೆ. ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಅಸ್ಸಾಂ ಮುಖ್ಯಮಂತ್ರಿ ಬಂಡಾಯ ಶಾಸಕರಿಗೆ ಐಷಾರಾಮಿ ವ್ಯವಸ್ಥೆ ಮಾಡಿಕೊಡುವಲ್ಲಿ ಬ್ಯೂಸಿ ಆಗಿದ್ದಾರೆ ಎಂದೂ ಆರೋಪಿಸಿದ್ದವು. ಇದೆಲ್ಲದರ ನಡುವೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ, ಗುವಾಹಟಿ ರೆಸಾರ್ಟ್‌ಗೆ ಬಂದಿರುವ ಶಿವಸೇನೆ ಶಾಸಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ʼಹೊರಗಿನಿಂದ ಯಾರೇ ನಮ್ಮ ರಾಜ್ಯಕ್ಕೆ ಬರಲಿ, ಅವರಿಗೆ ಸೂಕ್ತವಾದ ಆದರಾತಿಥ್ಯ ಒದಗಿಸುವುದು ನಮ್ಮ ಕರ್ತವ್ಯ. ಈಗ ಶಿವಸೇನೆ ಶಾಸಕರು ಇಲ್ಲಿಗೆ ಬಂದಿದ್ದರಿಂದ ನಮ್ಮ ರಾಜ್ಯದ ಪ್ರವಾಹದ ಭೀಕರತೆ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆʼ ಎಂದು ಹೇಳಿರುವ ಹಿಮಂತ ಬಿಸ್ವಾ ಶರ್ಮಾ, ಗುವಾಹಟಿಯಲ್ಲಿ 200 ಹೋಟೆಲ್‌ಗಳಿವೆ. ಆ ಎಲ್ಲ ಹೋಟೆಲ್‌ಗಳಲ್ಲೂ ಜನರು ತಂಗಿದ್ದಾರೆ. ಪ್ರವಾಹ ಬಂತು ಎಂಬ ಒಂದೇ ಕಾರಣಕ್ಕೆ ಅವರನ್ನೆಲ್ಲ ಹೋಟೆಲ್‌ನಿಂದ ಹೊರಹಾಕಲು ಆಗುತ್ತದೆಯಾ ಎಂದೂ ಪ್ರಶ್ನಿಸಿದ್ದಾರೆ. ʼಹೊರಗಿನಿಂದ ನಮ್ಮ ರಾಜ್ಯಕ್ಕೆ ಯಾರೇ ಬರಲಿ ಅವರಿಗೆ ಸೂಕ್ತವಾದ ಭದ್ರತೆ, ವ್ಯವಸ್ಥೆ ನೀಡುವುದು ನಮ್ಮ ಜವಾಬ್ದಾರಿ. ನಾಳೆ ಕಾಂಗ್ರೆಸ್‌ನವರು ಬಂದರೂ ನಾವು ಇಷ್ಟೇ ಆದರದಿಂದ ಸ್ವಾಗತಿಸುತ್ತೇವೆʼ ಎಂದು ತಿಳಿಸಿದ್ದಾರೆ.
ಶಿವಸೇನೆ ಶಾಸಕರಿಗೆ ಬಿಜೆಪಿಯೇ ಹೋಟೆಲ್ ವ್ಯವಸ್ಥೆ ಮಾಡಿದೆ, ಅವರ ಹೋಟೆಲ್ ಬಿಲ್‌ನ್ನು ಕೂಡ ಬಿಜೆಪಿಯೇ ಪಾವತಿಸಲಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಹಿಮಂತಾ ಬಿಸ್ವಾ ಶರ್ಮಾ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ನಾವು ಹೋಟೆಲ್ ರೂಮ್ ಮಾಡಿಕೊಟ್ಟಿಲ್ಲ. ಬಾಡಿಗೆ ಹಣ ಪಾವತಿಯೂ ನಮ್ಮ ಹೊಣೆಯಲ್ಲ ಎಂದು ಹೇಳಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದಲ್ಲಿ ೪೦ಕ್ಕೂ ಶಾಸಕರು ಗುವಾಹಟಿ ಹೋಟೆಲ್ ಸೇರಿದ್ದಾರೆ. ಬುಧವಾರ ಹಿಮಂತಾ ಬಿಸ್ವಾ ಶರ್ಮಾ ಕೂಡ ಅಲ್ಲಿ ಭೇಟಿ ನೀಡಿದ್ದರು. ಆದರೆ ನಾನು ಸುಮ್ಮನೆ ಹೋಗಿ ವಿಚಾರಿಸಿದ್ದಷ್ಟೇ, ಶಾಸಕರ ಬಂಡಾಯದಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Video: ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಪ್ರತಿಭಟನೆ; ಶಿವಸೇನೆ ಬಂಡಾಯ ಶಾಸಕನ ಕಚೇರಿ ಧ್ವಂಸ