ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ವಿಧಾನಸಭೆ ಚುನಾವಣೆ ನಡೆದಿತ್ತು. ಹಾಗೇ, ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5ರಂದು, ಎರಡು ಹಂತದಲ್ಲಿ ಮತದಾನ ನಡೆದಿತ್ತು. ಇವೆರಡೂ ರಾಜ್ಯಗಳ ಮತ ಎಣಿಕೆ ಆಯಾ ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ವರದಿ. ಈಗಾಗಲೇ ಎರಡೂ ರಾಜ್ಯಗಳಲ್ಲಿ ಪ್ರಾರಂಭ ಆಗಿರುವ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ, ನಿಮ್ಮ ವಿಸ್ತಾರ ನ್ಯೂಸ್ (http://www.vistaranews.com)ವೆಬ್ಸೈಟ್ನಲ್ಲಿ.
ಅಳಿಯನ ವಿರುದ್ಧ ಗೆದ್ದ ಕಾಂಗ್ರೆಸ್ ಅಭ್ಯರ್ಥಿ
ಹಿಮಾಚಲ ಪ್ರದೇಶದ ಸೋಲನ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ 82ವರ್ಷದ ಧನಿ ರಾಮ್ ಶಾಂಡಿಲ್ ಅವರು, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ರಾಜೇಶ್ ಕಶ್ಯಪ್ ಅವರಿಗಿಂತ 3858 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಿಮಾಚಲ ಪ್ರದೇಶ ಚುನಾವಣಾ ಕಣದಲ್ಲಿರುವ ಅತ್ಯಂತ ಹಿರಿಯ ಅಭ್ಯರ್ಥಿಯಾಗಿರುವ ಧನಿರಾಮ್. ಇವರು ತಮ್ಮ ಅಳಿಯನೇ ಆಗಿರುವ ಬಿಜೆಪಿ ಅಭ್ಯರ್ಥಿ ರಾಜೇಶ್ ಕಶ್ಯಪ್ ಅವರನ್ನು ಸೋಲಿಸಿದ್ದಾರೆ.
ಗುಜರಾತ್ನಲ್ಲಿ ಗೆದ್ದ ಕಮಲ-ಹಿಮಾಚಲ ಪ್ರದೇಶದಲ್ಲಿ ಕೈ ಜಯ
ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ವೋಟ್ ಶೇರಿಂಗ್ ಪಡೆದು (ಶೇ.53) ಬಿಜೆಪಿ ಅಮೋಘ ಗೆಲುವು ಪಡೆದಿದ್ದರೆ, ಕಾಂಗ್ರೆಸ್ ಶೇ.27ರಷ್ಟು ಮತ್ತು ಆಪ್ ಶೇ. 13 ರಷ್ಟು ಮತಗಳಿಸಿದೆ. ಇಲ್ಲೀಗ ಏಳನೇ ಭಾರಿಗೆ ಬಿಜೆಪಿ ಗೆಲ್ಲುತ್ತಿದೆ. ಇನ್ನೊಂದೆಡೆ ಹಿಮಾಚಲ ಪ್ರದೇಶದಲ್ಲಿ ಇದ್ದ ಬಿಜೆಪಿ ಸರ್ಕಾರವನ್ನು ಸಾರಾಸಗಾಟವಾಗಿ ಅಲ್ಲಿನ ಜನರು ತಿರಸ್ಕರಿಸಿದ್ದಾರೆ. ಈ ಸಲ ಕಾಂಗ್ರೆಸ್ಗೆ ಮಣೆ ಹಾಕಿದ್ದಾರೆ.
ಗುಜರಾತ್ ಕಾಂಗ್ರೆಸ್ ಉಸ್ತುವಾರಿ ರಾಜೀನಾಮೆ
ಗುಜರಾತ್ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ನಿಶ್ಚಿತವಾಗಿ, ಕಾಂಗ್ರೆಸ್ ಹೀನಾಯ ಸೋಲು ಖಚಿತವಾಗುತ್ತಿದ್ದಂತೆ ಆ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಾಘು ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನಮಗ್ಯಾವ ಭಯವೂ ಇಲ್ಲ ಎಂದ ಕಾಂಗ್ರೆಸ್ ಮುಖ್ಯಸ್ಥೆ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಅಲ್ಲಿನ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ವೀರಭದ್ರ ಸಿಂಗ್ ಪ್ರತಿಕ್ರಿಯೆ ನೀಡಿ, ‘ಜನಾದೇಶ ನಮ್ಮ ಪರವಾಗಿದೆ. ಹಾಗಾಗಿ ಭಯಪಡುವ ಅಗತ್ಯವಿಲ್ಲ. ನಾವು ನಮ್ಮ ಸಭೆಯನ್ನು ಚಂಡಿಗಢ್ನಲ್ಲಾದರೂ ನಡೆಸಿಕೊಳ್ಳಬಹುದು ಅಥವಾ ಇನ್ನೆಲ್ಲಿಯಾದರೂ ಸಭೆ ಸೇರಬಹುದು. ಆದರೆ ಸರ್ಕಾರ ರಚನೆ ಮಾಡುವುದಂತೂ ಗ್ಯಾರಂಟಿ‘ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶ ಚುನಾವಣೆ ರಿಸಲ್ಟ್
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಒಟ್ಟು 10 ಕ್ಷೇತ್ರಗಳಲ್ಲಿ 7 ಸೀಟ್ಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಇನ್ನೆರಡು ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿಲ್ಲ.