ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ವಿಧಾನಸಭೆ ಚುನಾವಣೆ ನಡೆದಿತ್ತು. ಹಾಗೇ, ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5ರಂದು, ಎರಡು ಹಂತದಲ್ಲಿ ಮತದಾನ ನಡೆದಿತ್ತು. ಇವೆರಡೂ ರಾಜ್ಯಗಳ ಮತ ಎಣಿಕೆ ಆಯಾ ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ವರದಿ. ಈಗಾಗಲೇ ಎರಡೂ ರಾಜ್ಯಗಳಲ್ಲಿ ಪ್ರಾರಂಭ ಆಗಿರುವ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ, ನಿಮ್ಮ ವಿಸ್ತಾರ ನ್ಯೂಸ್ (http://www.vistaranews.com)ವೆಬ್ಸೈಟ್ನಲ್ಲಿ.
ಜನ ಬಿಜೆಪಿ ಮೇಲಿಟ್ಟ ಅಚಲ ನಂಬಿಕೆ ಗುಜರಾತ್ ಗೆಲುವು
ಗುಜರಾತ್ ಜನರು ಇತಿಹಾಸ ಸೃಷ್ಟಿಸುವ ಕೆಲಸವನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುಜರಾತ್ನಲ್ಲಿ ಮಾಡಲಾದ ಎಲ್ಲ ಅಭಿವೃದ್ಧಿ ಕೆಲಸಗಳನ್ನೂ ಜನ ಗೌರವಿಸಿದ್ದಾರೆ ಮತ್ತು ಇನ್ನೊಮ್ಮೆ ಬಿಜೆಪಿಯನ್ನು ಆಶೀರ್ವದಿಸಿ, ಈ ಹಿಂದಿನ ಗೆಲುವಿನ ಎಲ್ಲ ದಾಖಲೆಗಳನ್ನೂ ಮುರಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕೆಲಸಗಳ ಮೇಲೆ ಜನರಿಟ್ಟ ನಂಬಿಕೆಗೆ ಇದು ಸಾಕ್ಷಿ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
गुजरात ने हमेशा इतिहास रचने का काम किया है।
पिछले दो दशक में मोदी जी के नेतृत्व में भाजपा ने गुजरात में विकास के सभी रिकॉर्ड तोड़े और आज गुजरात की जनता ने भाजपा को आशीर्वाद देकर जीत के सभी रिकॉर्ड तोड़ दिये।
यह @narendramodi जी के विकास मॉडल में जनता के अटूट विश्वास की जीत है।
— Amit Shah (@AmitShah) December 8, 2022
ಶಿಮ್ಲಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು
ಹಿಮಾಚಲ ಪ್ರದೇಶದ ಶಿಮ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ಜನರ್ಥಾ ಅವರು ಬಿಜೆಪಿ ಅಭ್ಯರ್ಥಿ ಸಂಜಯ್ ಸೂದ್ಗಿಂತ 3037 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಗುಜರಾತ್ನಲ್ಲಿ ಕಾಂಗ್ರೆಸ್ಗೆ ಪ್ರತಿಪಕ್ಷ ಸ್ಥಾನ ಕೈತಪ್ಪುವ ಸಾಧ್ಯತೆ
ಗುಜರಾತ್ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಕಾಂಗ್ರೆಸ್ಗೆ ಅಧಿಕೃತ ಪ್ರತಿಪಕ್ಷದ ಸ್ಥಾನವೂ ಕೈತಪ್ಪುವ ಸಾಧ್ಯತೆ ಇದೆ. ಯಾವುದೇ ಪಕ್ಷ ವಿಧಾನಸಭೆಯಲ್ಲಿ ಅಧಿಕೃತ ವಿಪಕ್ಷ ಎನ್ನಿಸಿಕೊಳ್ಳಲು ಶೇ.10ರಷ್ಟು ಸ್ಥಾನಗಳನ್ನು ಗೆಲ್ಲಬೇಕು. ಅಂದರೆ ಕಾಂಗ್ರೆಸ್ ಗುಜರಾತ್ನಲ್ಲಿ 19 ಕ್ಷೇತ್ರಗಳಲ್ಲಾದರೂ ಗೆಲ್ಲಬೇಕಿತ್ತು. ಆದರೆ ಸದ್ಯ ಆ ಪಕ್ಷ 16 ಸ್ಥಾನಗಳಲ್ಲಿ ಮುನ್ನಡೆಯಿದೆ. ಮತ ಎಣಿಕೆ ಮುಕ್ತಾಯ ಆಗುವ ಹೊತ್ತಿಗೆ ಕಾಂಗ್ರೆಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬುದರ ಮೇಲೆ ಅಧಿಕೃತ ಪ್ರತಿಪಕ್ಷ ಆಗಲಿದೆಯಾ ಅಥವಾ ಆ ಸ್ಥಾನವೂ ಅದರ ಕೈತಪ್ಪಲಿದೆಯಾ ಎಂಬುದರ ಸ್ಪಷ್ಟ ಚಿತ್ರಣ ಸಿಗಲಿದೆ.
ಗುಜರಾತ್ನಲ್ಲಿ ಭೂಪೇಂದ್ರ ಪಟೇಲ್ ಸಿಎಂ
ಗುಜರಾತ್ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಹೆಸರನ್ನು ಘೋಷಣೆ ಮಾಡಿದೆ. 2021ರ ಸೆಪ್ಟೆಂಬರ್ನಿಂದ ಗುಜರಾತ್ನಲ್ಲಿ ಸಿಎಂ ಆಗಿರುವ ಭೂಪೇಂದ್ರ ಪಟೇಲ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಗುಜರಾತ್ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್
ಘೋಷಿಸಿದ್ದಾರೆ. ಭೂಪೇಂದ್ರ ಪಟೇಲ್ ಅವರು ಡಿಸೆಂಬರ್ 12ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಹಿಮಾಚಲ ಪ್ರದೇಶದ ಸಿಎಂ ಯಾರಾಗಬಹುದು?
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲುವ ಲಕ್ಷಣಗಳು ದಟ್ಟವಾಗಿವೆ. ಈ ಹೊತ್ತಲ್ಲಿ ಕಾಂಗ್ರೆಸ್ನಿಂದ ಯಾರು ಮುಖ್ಯಮಂತ್ರಿಯಾಗಬಹುದು ಎಂಬ ಪ್ರಶ್ನೆ ಎದ್ದಿದೆ. ಸದ್ಯ ಪ್ರತಿಭಾ ಸಿಂಗ್, ಸುಖ್ವಿಂದರ್ ಸಿಂಗ್ ಸುಕ್ಕು, ಮುಕೇಶ್ ಅಗ್ನಿಹೋತ್ರಾ ಸಿಎಂ ಹುದ್ದೆ ಆಕಾಂಕ್ಷಿಗಳಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆಹಾಕಲಿದೆ ಎಂಬ ಕುತೂಹಲ ಎದ್ದಿದೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 40 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 25 ಕ್ಷೇತ್ರಗಳಲ್ಲಿ ಮುಂದಿದೆ. ಅಲ್ಲಿ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಬೇಕು ಎಂದರೆ ಕನಿಷ್ಠ 35 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಆದರೆ ಕಾಂಗ್ರೆಸ್ ಈಗಾಗಲೇ 40 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿ ಇರುವುದರಿಂದ ಸರಳ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಲಾಗಿದೆ.