ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ವಿಧಾನಸಭೆ ಚುನಾವಣೆ ನಡೆದಿತ್ತು. ಹಾಗೇ, ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5ರಂದು, ಎರಡು ಹಂತದಲ್ಲಿ ಮತದಾನ ನಡೆದಿತ್ತು. ಇವೆರಡೂ ರಾಜ್ಯಗಳ ಮತ ಎಣಿಕೆ ಆಯಾ ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ವರದಿ. ಈಗಾಗಲೇ ಎರಡೂ ರಾಜ್ಯಗಳಲ್ಲಿ ಪ್ರಾರಂಭ ಆಗಿರುವ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ, ನಿಮ್ಮ ವಿಸ್ತಾರ ನ್ಯೂಸ್ (http://www.vistaranews.com)ವೆಬ್ಸೈಟ್ನಲ್ಲಿ.
ಗುಜರಾತ್ನಲ್ಲಿ ಡಿ.12ರಂದು ಬಿಜೆಪಿ ಸರ್ಕಾರ ರಚನೆ
ಗುಜರಾತ್ನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿ ಡಿ.12ರಂದು ಸರ್ಕಾರ ರಚನೆ ಮಾಡಲಿದೆ. ಅಹ್ಮದಾಬಾದ್ನ ಮೋದಿ ಸ್ಟೇಡಿಯಂನಲ್ಲಿ ಅಂದು ಮಧ್ಯಾಹ್ನ 2ಗಂಟೆಗೆ ನೂತನ ಜನಪ್ರತಿನಿಧಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಾಹಿತಿ ನೀಡಿದ್ದಾರೆ.
ಗುಜರಾತ್ನಲ್ಲಿ ಬಿಜೆಪಿ ಭರ್ಜರಿ ಸಂಭ್ರಮ
ಗುಜರಾತ್ 182 ವಿಧಾನಸಭಾ ಕ್ಷೇತ್ರಗಳಲ್ಲಿ 158 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲಿ ಈಗಾಗಲೇ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಪ್ರಾರಂಭವಾಗಿದೆ. ಸೂರತ್ನಲ್ಲಿ ಬಿಜೆಪಿ ಕಾರ್ಯಕರ್ತರು ಡೋಲು ಬಡಿದು, ನೃತ್ಯ ಮಾಡಿ ಸಡಗರಪಡುತ್ತಿದ್ದಾರೆ.
#watch | Gujarat: BJP workers celebrate in Surat as the party sweeps #gujaratassemblypolls. As per the official EC trends, BJP has won 5 seats and is leading on 150 of the total 182 seats in the state. pic.twitter.com/OULjOcwy3H
— ANI (@ANI) December 8, 2022
ಹಾರ್ದಿಕ್ ಪಟೇಲ್ಗೆ ಗೆಲುವು
ಗುಜರಾತ್ನ ವಿರಾಮಗಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಇವರು ಕಾಂಗ್ರೆಸ್ನಲ್ಲಿ ಇದ್ದವರು. ಇದೇ ವರ್ಷ ಮೇ ತಿಂಗಳಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
ಹಿಮಾಚಲ ಪ್ರದೇಶದ ಸಿಎಂ ಯಾರಾಗಬಹುದು?
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲುವ ಲಕ್ಷಣಗಳು ದಟ್ಟವಾಗಿವೆ. ಈ ಹೊತ್ತಲ್ಲಿ ಕಾಂಗ್ರೆಸ್ನಿಂದ ಯಾರು ಮುಖ್ಯಮಂತ್ರಿಯಾಗಬಹುದು ಎಂಬ ಪ್ರಶ್ನೆ ಎದ್ದಿದೆ. ಸದ್ಯ ಪ್ರತಿಭಾ ಸಿಂಗ್, ಸುಖ್ವಿಂದರ್ ಸಿಂಗ್ ಸುಕ್ಕು, ಮುಕೇಶ್ ಅಗ್ನಿಹೋತ್ರಾ ಸಿಎಂ ಹುದ್ದೆ ಆಕಾಂಕ್ಷಿಗಳಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆಹಾಕಲಿದೆ ಎಂಬ ಕುತೂಹಲ ಎದ್ದಿದೆ.
ಸಂಜೆ ಪ್ರಧಾನಿ ಮೋದಿ ಭಾಷಣ
ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ ಅಧಿಕೃತ ಫಲಿತಾಂಶ ಸಂಜೆ 5ಗಂಟೆ ಹೊತ್ತಿಗೆ ಹೊರಬೀಳಲಿದೆ. ಅದರ ಬಳಿಕ ಸಂಜೆ 6ಗಂಟೆ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.