ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ವಿಧಾನಸಭೆ ಚುನಾವಣೆ ನಡೆದಿತ್ತು. ಹಾಗೇ, ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5ರಂದು, ಎರಡು ಹಂತದಲ್ಲಿ ಮತದಾನ ನಡೆದಿತ್ತು. ಇವೆರಡೂ ರಾಜ್ಯಗಳ ಮತ ಎಣಿಕೆ ಆಯಾ ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ವರದಿ. ಈಗಾಗಲೇ ಎರಡೂ ರಾಜ್ಯಗಳಲ್ಲಿ ಪ್ರಾರಂಭ ಆಗಿರುವ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ, ನಿಮ್ಮ ವಿಸ್ತಾರ ನ್ಯೂಸ್ (http://www.vistaranews.com)ವೆಬ್ಸೈಟ್ನಲ್ಲಿ.
ಗುಜರಾತ್ನ ಪಾದ್ರಾದಲ್ಲಿ ಬಿಜೆಪಿ ಗೆಲುವು
ಗುಜರಾತ್ನ ಪಾದ್ರಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚೈತನ್ಯಸಿಂಹ ಪ್ರತಾಪ್ ಸಿಂಹ ಜಾಲಾ ಅವರು ಗೆದ್ದಿದ್ದಾರೆ. ಇಲ್ಲಿ ಕಾಂಗ್ರೆಸ್ನಿಂದ ಜಶ್ಪಾಲ್‌ಸಿಂಹ ಮಹೇಂದ್ರಸಿಂಹ ಪಾಧಿಯಾರ್, ಆಪ್ನಿಂದ ಸಂದೀಪ್‌ಸಿಂಹ ವಿಕ್ರಮಸಿಂಹ ರಾಜ್ ಸ್ಪರ್ಧಿಸಿದ್ದರು.
ಗುಜರಾತ್ನಲ್ಲಿ ಸಂಭ್ರಮ
ಗುಜರಾತ್ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು, ದಾಖಲೆಯ ಜಯ ಸಾಧಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಅಲ್ಲಿ 152 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 19, ಆಪ್ 7 ಮತ್ತು ಪಕ್ಷೇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಮಧ್ಯೆ ಗುಜರಾತ್ನ ಬಿಜೆಪಿ ಪ್ರಧಾನ ಕಚೇರಿ ಕಮಲಂ ಬಳಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಆಚರಣೆ ಪ್ರಾರಂಭವಾಗಿದೆ. ಮಹಿಳಾ ಕಾರ್ಯಕರ್ತರು ಭರ್ಜರಿ ಸಡಗರದಲ್ಲಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮ್ಯಾಜಿಕ್ ನಂಬರ್ ತಲುಪಿದ ಕಾಂಗ್ರೆಸ್
ಹಿಮಾಚಲ ಪ್ರದೇಶದಲ್ಲಿ ಅಂತಿಮವಾಗಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 37 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮ್ಯಾಜಿಕ್ ನಂಬರ್ ಕ್ರಾಸ್ ಮಾಡಿದೆ. ಬಿಜೆಪಿ 28 ಮತ್ತು ಪಕ್ಷೇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಠಾಕೂರ್ಗೆ ಗೆಲುವು
ಹಿಮಾಚಲ ಪ್ರದೇಶ ಮುಖ್ಯಮಂತ್ರಿ, ಬಿಜೆಪಿ ನಾಯಕ ಜೈರಾಮ್ ಠಾಕೂರ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ನ ಚೇತ್ರಾಮ್ ಠಾಕೂರ್ಗಿಂತಲೂ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಹಿಮಾಚಲ ಪ್ರದೇಶಕ್ಕೆ ಮಹಾ ಡಿಸಿಎಂ ಎಂಟ್ರಿ
ಹಿಮಾಚಲ ಪ್ರದೇಶಲ್ಲಿ ಕಾಂಗ್ರೆಸ್ 34 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 30 ಕ್ಷೇತ್ರಗಳಲ್ಲಿ ಮುಂದಿದೆ. ಇಲ್ಲೀಗ ಸರ್ಕಾರ ರಚನೆ ಮಾಡಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಮುನ್ನಡೆ ಸಾಧಿಸಿರುವ ನಾಲ್ವರು ಪಕ್ಷೇತರರ ಸಹಾಯ ಪಡೆಯಲು ಯೋಜನೆ ಸಿದ್ಧವಾಗುತ್ತಿದೆ. ಆ ನಾಲ್ವರನ್ನೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭೇಟಿಯಾಗಿದ್ದಾರೆ. ಈ ನಾಲ್ವರಲ್ಲಿ ಮೂವರು ಬಿಜೆಪಿ ಬಂಡಾಯ ಅಭ್ಯರ್ಥಿಗಳೇ ಆಗಿದ್ದಾರೆ.