Site icon Vistara News

ಪ್ರಧಾನಿ ಕಾರ್ಯಾಲಯದ ಅಧಿಕಾರಿಯೆಂದು ಕಾಶ್ಮೀರದಲ್ಲಿ ಝಡ್​ ಪ್ಲಸ್​ ಭದ್ರತೆ ಪಡೆದಿದ್ದವ ಅರೆಸ್ಟ್​; ಇವನೆಂಥಾ ಸ್ಮಾರ್ಟ್​ ವಂಚಕ!

Gujarat Conman Who posing as PMO official Arrested In Kashmir

#image_title

ಪ್ರಧಾನಿ ಕಾರ್ಯಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಎಂದು ಹೇಳಿಕೊಂಡು, ವಂಚಿಸುತ್ತಿದ್ದ ಗುಜರಾತ್​​ ಮೂಲದ ವ್ಯಕ್ತಿಯೊಬ್ಬನ್ನು ಶ್ರೀನಗರದ ಪಂಚತಾರಾ ಹೋಟೆಲ್​​​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತನ ಹೆಸರು ಕಿರಣ್​ ಜೆ ಪಟೇಲ್​. ಬ್ಲ್ಯೂಟಿಕ್​ ಮೂಲಕ ದೃಢೀಕರಣಗೊಂಡಿರುವ ಟ್ವಿಟರ್​ ಅಕೌಂಟ್​​ನ್ನು ಹೊಂದಿದ್ದ, ಸಾವಿರಾರು ಜನ ಫಾಲೋವರ್ಸ್​ ಕೂಡ ಇದ್ದರು. ತಾನು ಪ್ರಧಾನ ಮಂತ್ರಿ ಕಚೇರಿಯಲ್ಲಿ ಕಾರ್ಯತಂತ್ರ ಮತ್ತು ಪ್ರಚಾರ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂದು ಹೋದಲ್ಲೆಲ್ಲ ಹೇಳಿಕೊಳ್ಳುತ್ತಿದ್ದ.

ಈ ಕಿರಣ್​ ಜೆ ಪಟೇಲ್​ ಕಾಶ್ಮೀರದಲ್ಲಿರುವ ಹಲವು ಪ್ರವಾಸಿ ತಾಣಗಳಿಗೆ ಭೇಟಿಕೊಟ್ಟಿದ್ದ. ಕೇಂದ್ರ ಸರ್ಕಾರ ವತಿಯಿಂದ ಪ್ರವಾಸಿ ತಾಣಗಳ ಹೋಟೆಲ್​​ ವ್ಯವಸ್ಥೆಯನ್ನು ಪರಿಶೀಲಿಸಲು ಬಂದಿದ್ದೇನೆ ಎನ್ನುತ್ತಿದ್ದ. ಅದೆಷ್ಟರ ಮಟ್ಟಿಗೆ ವಂಚಿಸಿದ್ದ ಎಂದರೆ, ಈ ವ್ಯಕ್ತಿ ಜಮ್ಮು-ಕಾಶ್ಮೀರದ ಭೇಟಿ ವೇಳೆ ಝಡ್​ ಪ್ಲಸ್​ ಭದ್ರತೆ ಪಡೆದಿದ್ದ. ಬುಲೆಟ್​ಪ್ರೂಫ್​ ಎಸ್​ಯುವಿ ಮತ್ತು ಜಮ್ಮು-ಕಾಶ್ಮಿರದ ಫೈವ್​ ಸ್ಟಾರ್ ಹೋಟೆಲ್​​ನಲ್ಲಿ ವಸತಿ ವ್ಯವಸ್ಥೆ ಸಿಕ್ಕಿತ್ತು. ಸರ್ಕಾರದ ಹಣದಲ್ಲಿ ಭರ್ಜರಿ ಎಂಜಾಯ್​ ಮಾಡುತ್ತಿದ್ದ!

ಇದನ್ನೂ ಓದಿ: Terror Funding Case: ಜಮ್ಮು-ಕಾಶ್ಮೀರದಲ್ಲಿ ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದ ಎನ್​ಐಎ; ಮುಂದುವರಿದ ಶೋಧ

ಹೀಗೆ ಈತ ಮಾರ್ಚ್​ 3ರಂದು ಮೂರನೇ ಬಾರಿಗೆ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದ. ಈ ವೇಳೆ ಆತ, ‘ದಕ್ಷಿಣ ಕಾಶ್ಮೀರದ ಸೇಬು ತೋಟವನ್ನು ಖರೀದಿಸಲು, ಖರೀದಿದಾರರನ್ನು ಗುರುತಿಸುವ ಸಲುವಾಗಿ ಸರ್ಕಾರ ತನ್ನನ್ನಿಲ್ಲಿ ಕಳಿಸಿದೆ ಎಂದು ಹೇಳಿಕೊಂಡಿದ್ದ. ರಾಷ್ಟ್ರರಾಜಧಾನಿಯ ದೊಡ್ಡದೊಡ್ಡ ರಾಜಕಾರಣಿಗಳ ಹೆಸರು ಇವನ ಬಾಯತುದಿಯಲ್ಲೇ ಇರುತ್ತಿತ್ತು. ಹಾಗಾಗಿ ಕಾಶ್ಮೀರದ ಐಎಎಸ್​ ಅಧಿಕಾರಿಗಳು ಕೂಡ ಸಹಜವಾಗಿಯೇ ಭಯದಿಂದ ವರ್ತಿಸುತ್ತಿದ್ದರು. ಆದರೆ ಕಿರಣ್​ ಜೆ ಪಟೇಲ್ ಮೇಲೆ ಕಾಶ್ಮೀರದ ಸಿಐಡಿ ತನಿಖಾ ದಳ ಕಣ್ಣಿಟ್ಟಿತ್ತು. ಸಿಐಡಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಶ್ರೀನಗರದ ಲಲಿತ್ ಗ್ರ್ಯಾಂಡ್ ಪಂಚತಾರ ಹೋಟೆಲ್​ನಿಂದ ಅವನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ವಂಚನೆ ಮತ್ತು ಫೋರ್ಜರಿ ಕೇಸ್​ ದಾಖಲಾಗಿದೆ. ಈಗಾಗಲೇ ಅವನನ್ನು ಶ್ರೀನಗರದ ಕೋರ್ಟ್​ಗೆ ಹಾಜರುಪಡಿಸಲಾಗಿದೆ.

ಕಿರಣ್​ ಪಟೇಲ್​​ಗೆ ಟ್ವಿಟರ್​​ನಲ್ಲಿ ಗುಜರಾತ್​ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್​ಸಿನ್ಹ್​​ ವಘೇಲಾ ಸೇರಿ ಹಲವು ಪ್ರಮುಖರು ಫಾಲೋವರ್ಸ್​ ಇದ್ದರು. ತಾನು ಕಾಶ್ಮೀರದಲ್ಲಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ವಿಡಿಯೊ, ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದ. ಅವನ ಫೋಟೋದಲ್ಲಿ ಭದ್ರತಾ ಸಿಬ್ಬಂದಿ ಇದ್ದೇ ಇರುತ್ತಿದ್ದರು. ಇದೇ ಕಾರಣಕ್ಕೆ ಕಿರಣ್ ಪಟೇಲ್​ ಮೇಲೆ ಅನುಮಾನ ಬಂದಿತ್ತು. ಇಷ್ಟೊಂದು ಭದ್ರತೆಯನ್ನು ಪಡೆಯುತ್ತಿರುವ ಇವನ್ಯಾರು ಎಂಬ ಬಗ್ಗೆ ತನಿಖೆ ನಡೆದಿತ್ತು. ಅಂದಹಾಗೇ, ಈ ಪಟೇಲ್​, ತಾನು ವರ್ಜೀನಿಯಾದ ಕಾಮನ್​ವೆಲ್ತ್​ ಯೂನಿವರ್ಸಿಟಿಯಲ್ಲಿ ಪಿಎಚ್​ಡಿ ಮಾಡಿದ್ದೇನೆ, ಕಂಪ್ಯೂಟರ್​ ಇಂಜಿನಿಯರಿಂಗ್​ನಲ್ಲಿ ಬಿಇ, ಕಂಪ್ಯೂಟರ್​ ಸೈನ್ಸ್​ನಲ್ಲಿ ಎಂ.ಟೆಕ್​ ಮಾಡಿದ್ದೇನೆ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದ.

Exit mobile version