ಗಾಂಧಿನಗರ: ಗುಜರಾತ್ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಮುಂದುವರಿಸಲು ಬಿಜೆಪಿ ಸರ್ಕಾರ ರಣತಂತ್ರ ರೂಪಿಸಿದೆ. ಇದಕ್ಕಾಗಿ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿರುವ ಇತರೆ ಹಿಂದುಳಿದ ವರ್ಗಗಳ (OBC Reservation) ಮೀಸಲಾತಿಯನ್ನು ಶೇ.17ರಷ್ಟು ಏರಿಕೆ ಮಾಡಿದೆ. ಇದರೊಂದಿಗೆ ಗುಜರಾತ್ (Gujarat) ಸ್ಥಳೀಯ ಸಂಸ್ಥೆಗಳಲ್ಲಿರುವ ಒಬಿಸಿ ಮೀಸಲಾತಿಯು ಶೇ.10ರಿಂದ ಶೇ.27ಕ್ಕೆ ಏರಿಕೆಯಾದಂತಾಗಿದೆ.
“ಜಸ್ಟಿಸ್ ಝಾವೇರಿ ಆಯೋಗದ ವರದಿ ಆಧರಿಸಿ ಗುಜರಾತ್ ಸರ್ಕಾರವು ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿಯನ್ನು ಶೇ.27ಕ್ಕೆ ಏರಿಕೆ ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮೀಸಲಾತಿ ಏರಿಕೆ ಕುರಿತು ವಿಧೇಯಕ ಮಂಡಿಸಲಾಗುವುದು” ಎಂದು ಗುಜರಾತ್ ಸಚಿವ ರಿಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಸಮುದಾಯದ ಮೀಸಲಾತಿ ಕುರಿತು ಅಧ್ಯಯನ ನಡೆಸಲು ಗುಜರಾತ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಝಾವೇರಿ ಆಯೋಗವನ್ನು ಸರ್ಕಾರ ರಚಿಸಿತ್ತು. ಈ ಆಯೋಗದ ವರದಿ ಅನ್ವಯ ಮೀಸಲಾತಿ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ. ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ನೀಡಿರುವ ಶೇ.14, ಪರಿಶಿಷ್ಟ ಪಂಗಡಕ್ಕೆ ನೀಡಿರುವ ಶೇ.7ರಷ್ಟು ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇದನ್ನೂ ಓದಿ: OBC Reservation: ಚುನಾವಣೆಗೆ ಮಾಸ್ಟರ್ ಸ್ಟ್ರೋಕ್; ಒಬಿಸಿಗೆ ಹೆಚ್ಚುವರಿ ಮೀಸಲಾತಿ ಘೋಷಿಸಿದ ಕಾಂಗ್ರೆಸ್ ಸರ್ಕಾರ
ರಾಜಸ್ಥಾನದಲ್ಲಿ ಮೀಸಲಾತಿ ಹೆಚ್ಚಳ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ರಾಜಸ್ಥಾನ ಸರ್ಕಾರವು ಇತರೆ ಇಂದುಳಿದ ವರ್ಗಗಳಲ್ಲಿಯೇ (OBC) ಅತಿ ಹೆಚ್ಚು ಹಿಂದುಳಿದವರಿಗೆ ಶೇ.6ರಷ್ಟು ಮೀಸಲಾತಿ ಘೋಷಿಸಿತ್ತು. “ಈಗಾಗಲೇ ರಾಜ್ಯದಲ್ಲಿ ಒಬಿಸಿಗೆ ಶೇ.21ರಷ್ಟು ಮೀಸಲಾತಿ ಇದೆ. ಈಗ ಹೆಚ್ಚುವರಿಯಾಗಿ ಶೇ.6ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದು ಇತರೆ ಹಿಂದುಳಿದ ವರ್ಗಗಳಲ್ಲಿಯೇ ಅತಿ ಹೆಚ್ಚು ಹಿಂದುಳಿದವರಿಗೆ ಅನ್ವಯವಾಗಲಿದೆ. ಇದರಿಂದ ಅತಿ ಹೆಚ್ಚು ಹಿಂದುಳಿದವರ ಏಳಿಗೆಗೆ ಕಾರಣವಾಗಲಿದೆ. ಹಾಗಾಗಿ, ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದರು.