ನವ ದೆಹಲಿ: 2019ರ ಮೋದಿ ಸರ್ನೇಮ್ಗೆ ಮಾಡಿದ ಅಪಮಾನದ ಕೇಸ್ನಲ್ಲಿ ದೋಷಿ ಎಂದು ಪರಿಗಣಿತರಾಗಿರುವ ರಾಹುಲ್ ಗಾಂಧಿ ಇದೀಗ ಗುಜರಾತ್ ಹೈಕೋರ್ಟ್ (Gujrat High Court) ಮೆಟ್ಟಿಲೇರಿದ್ದಾರೆ. ಆದರೆ ರಾಹುಲ್ ಗಾಂಧಿ ಮೇಲ್ಮನವಿ ಕೇಸ್ ವಿಚಾರಣೆಗೆ ನಿಯೋಜಿತರಾಗಿದ್ದ ನ್ಯಾಯಮೂರ್ತಿ ಗೀತಾ ಗೋಪಿ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
‘ತಾವು ರಾಹುಲ್ ಗಾಂಧಿ ಅರ್ಜಿ ವಿಚಾರಣೆ ನಡೆಸುವುದಿಲ್ಲ’ ಎಂದು ಹೈಕೋರ್ಟ್ ರಿಜಿಸ್ಟ್ರಿಗೆ (ನೋಂದಣಿ ವಿಭಾಗ) ತಿಳಿಸಿದ್ದು, ಈ ಕೇಸ್ನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಸುಪರ್ದಿಗೇ ಕೊಡಿ. ಅವರು ಬೇರೆ ಇನ್ಯಾರಾದಾರೂ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಿ ಎಂದಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಪರ ವಕೀಲರಾದ ಪಿ.ಎಸ್.ಚಪನೇರಿ ತಿಳಿಸಿದ್ದಾರೆ. ಗುಜರಾತ್ ಹೈಕೋರ್ಟ್ನಲ್ಲಿ ಈಗ ರಾಹುಲ್ ಗಾಂಧಿ ಮೇಲ್ಮನವಿಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಬೇಕಾಗಿರುವ ಹಿನ್ನೆಲೆ, ವಿಚಾರಣೆ ಪ್ರಾರಂಭವಾಗಲು ಇನ್ನೆರಡು ದಿನ ತಡವಾಗಬಹುದು ಎಂದೂ ಅವರು ಮಾಹಿತಿ ನೀಡಿದ್ದಾರೆ.
2019ರಲ್ಲಿ ರಾಹುಲ್ ಗಾಂಧಿಯವರು ಕೋಲಾರದಲ್ಲಿ ಮಾತನಾಡುತ್ತ, ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದು ಹೇಳಿದ್ದರು. ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಸೂರತ್ ಕೋರ್ಟ್ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2023ರ ಮಾರ್ಚ್ 23ರಂದು ತೀರ್ಪು ನೀಡಿದ್ದ ಸೂರತ್ ಕೋರ್ಟ್ ಈ ಕೇಸ್ನಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಹೇಳಿತ್ತು ಮತ್ತು 2ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಜಾಮೀನು ನೀಡಿತ್ತು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದನ ಸ್ಥಾನದಿಂದ ಅನರ್ಹರಾದರು. ಬಳಿಕ ರಾಹುಲ್ ಗಾಂಧಿ ಗುಜರಾತ್ ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಸೂರತ್ ಕೆಳನ್ಯಾಯಾಲಯ ಕೊಟ್ಟಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಸೆಷನ್ಸ್ ಕೋರ್ಟ್ನಲ್ಲೂ ಹಿನ್ನಡೆಯಾಗಿತ್ತು. ರಾಹುಲ್ ಗಾಂಧಿ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಅವರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಹುಲ್ ಗಾಂಧಿಯವರಿಗೆ ಸೂರತ್ ಕೆಳನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದಾಗದೆ ಇದ್ದರೆ, ಅವರು ಮುಂದಿನ 8ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವ ಅರ್ಹತೆಯನ್ನೂ ಕಳೆದುಕೊಳ್ಳುತ್ತಾರೆ. ರಾಹುಲ್ ಗಾಂಧಿ ಈಗಾಗಲೇ ದೆಹಲಿಯಲ್ಲಿರುವ ತಮ್ಮ ಸರ್ಕಾರಿ ಬಂಗಲೆಯನ್ನೂ ಖಾಲಿ ಮಾಡಿ, ತಾಯಿ ಸೋನಿಯಾ ಗಾಂಧಿ ಮನೆ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: Rahul Gandhi: ಶನಿವಾರ ಸರ್ಕಾರಿ ಬಂಗಲೆ ಖಾಲಿ ಮಾಡಲಿರುವ ‘ಅನರ್ಹ’ ರಾಹುಲ್ ಗಾಂಧಿ, ಮುಂದೇನು?