16ವರ್ಷದ ಅತ್ಯಾಚಾರ ಸಂತ್ರಸ್ತೆಯೊಬ್ಬಳ ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸಲು ಅನುಮತಿ ಕೊಡಿ ಎಂದು ಆಕೆಯ ಅಪ್ಪ ಗುಜರಾತ್ ಹೈಕೋರ್ಟ್ (Gujarat Highcourt) ಮೆಟ್ಟಿಲೇರಿದ್ದಾರೆ. ಆದರೆ ಈ ಕೇಸ್ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಸಮೀರ್ ದೇವ್ ‘ಅತ್ಯಾಚಾರ ಸಂತ್ರಸ್ತೆ ಮತ್ತು ರೇಪ್ ಮಾಡಿದ ಆರೋಪಿ’ ಮಧ್ಯೆ ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಆಕೆ ಈಗ ಏಳು ತಿಂಗಳ ಗರ್ಭಿಣಿ. 24 ವಾರಗಳವರೆಗಿನ ಅಂದರೆ ಆರು ತಿಂಗಳವರೆಗಿನ ಭ್ರೂಣವನ್ನು ತೆಗೆಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ 7ತಿಂಗಳ ಗರ್ಭವನ್ನು ಅಬಾರ್ಶನ್ ಮಾಡಿಸುವಂತಿಲ್ಲ. ಆದರೂ 16ವರ್ಷ ಮಗಳಿಗೆ, ಬೇಡವಾದ ಮಗುವನ್ನು ತೆಗೆಸಲು ಅನುಮತಿ ಕೊಡುವಂತೆ ಆಕೆಯ ಅಪ್ಪ ಕೋರ್ಟ್ ಮೆಟ್ಟಿಲೇರಿದ್ದರು.
ಕಳೆದ ಕೆಲವು ದಿನಗಳಿಂದಲೂ ಅರ್ಜಿ ವಿಚಾರಣೆ ನಡೆಸುತ್ತಿರುವ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸಮೀರ್ ದೇವ್ ಅವರು ವಕೀಲರ ಬಳಿ ‘ಸಂತ್ರಸ್ತೆಯಾಗಿರುವ 16ವರ್ಷದ ಹುಡುಗಿ ಮತ್ತು ಆಕೆ ಮೇಲೆ ರೇಪ್ ಮಾಡಿದ ಹುಡುಗನ ನಡುವೆ ರಾಜಿ ಮಾಡಿಸುವ ಸಾಧ್ಯತೆ ಇದೆಯಾ’ ಎಂದು ವಕೀಲರ ಬಳಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸ ವಕೀಲ ‘ನಾನು ಮೊದಲೇ ಪ್ರಯತ್ನ ಮಾಡಿದೆ. ಆದರೆ ಈ ವಿಚಾರದಲ್ಲಿ ಅತ್ಯಾಚಾರ ಮಾಡಿರುವ ಹುಡುಗ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಮೊರ್ಬಿ ಜಿಲ್ಲೆಯ ಜೈಲಿನಲ್ಲಿ ಆರೋಪಿ ಇದ್ದಾನೆ. ಹಾಗೊಮ್ಮೆ ಆರೋಪಿ ಒಪ್ಪಿಗೆ ಕೊಟ್ಟು, ಇವರು ಒಪ್ಪಂದಕ್ಕೆ ಬಂದರೆ ಆ ಹುಡುಗಿ, ಮಗು ಮತ್ತು ಆರೋಪಿ ಮೂವರ ಜೀವ ಉಳಿಯುತ್ತದೆ’ ಎಂದು ಹೇಳಿದ್ದಾರೆ.
ಮತ್ತೆ ಪ್ರತಿಕ್ರಿಯೆ ನೀಡಿದ ಹೈಕೋರ್ಟ್ ಜಡ್ಜ್, ‘ಅವನನ್ನು ಕೋರ್ಟ್ಗೆ ಕರೆಸಿ. ಸಂಧಾನದ ಸಾಧ್ಯತೆಗಳ ಬಗ್ಗೆ ನಾನು ಅವನ ಬಳಿ ಪ್ರಶ್ನೆ ಮಾಡುತ್ತೇನೆ. ನಾನು ರಾಜಿ ಸಂಧಾನದ ಸಾಧ್ಯತೆ ಬಗ್ಗೆಯಷ್ಟೇ ಯೋಚನೆ ಮಾಡುತ್ತಿದ್ದೇನೆ. ನನ್ನ ಮನಸಲ್ಲಿ ಹುಟ್ಟಿರುವ ವಿಚಾರದ ಬಗ್ಗೆ ಮಾತಾಡುತ್ತಿಲ್ಲ. ಅವರಿಬ್ಬರೂ ಒಟ್ಟಾಗಿ ಬದಕಲು ಒಪ್ಪಿದರೆ ಹಲವು ಸರ್ಕಾರಿ ಯೋಜನೆಗಳಡಿ ಸೌಲಭ್ಯ ಪಡೆಯಬಹುದು’ ಎಂದು ಹೇಳಿದ್ದಾರೆ. ಆ ಹುಡುಗನನ್ನೂ ಮತ್ತು ಸಂತ್ರಸ್ತೆಯನ್ನೂ ಕೋರ್ಟ್ಗೆ ಕರೆತರುವಂತೆ ಅವರ ಪರ ವಕೀಲರಿಗೆ ಸೂಚಿಸಿದ್ದಾರೆ. ನ್ಯಾಯಾಧೀಶರ ಈ ಅಭಿಪ್ರಾಯವೂ ಕೂಡ ಚರ್ಚೆಗೆ ಆಸ್ಪದವಾಗಿದೆ.
ಇದನ್ನೂ ಓದಿ: 17 ವರ್ಷದ ಹೆಣ್ಣುಮಕ್ಕಳು ಮಗು ಹೆರುವ ಕಾಲವಿತ್ತು; ರೇಪ್ ಸಂತ್ರಸ್ತೆಯ ಗರ್ಭಪಾತ ಬೇಡವೆಂದ ಹೈಕೋರ್ಟ್
ಜೂನ್ 7ರಂದು ಇದೇ ಕೇಸ್ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ‘ಭಾರತದಲ್ಲಿ 14-15ವರ್ಷಕ್ಕೆಲ್ಲ ಮದುವೆಯಾಗಿ 17ನೇ ವರ್ಷಕ್ಕೇ ಮಗುವನ್ನು ಹೆರುವ ಕಾಲ ಇತ್ತು. ಆದರೆ ನಾವೀಗ 21ನೇ ಶತಮಾನದಲ್ಲಿ ವಾಸಿಸುತ್ತಿದ್ದೇವೆ ಎಂಬ ಮಾತ್ರಕ್ಕೆ ಇಂಥದ್ದೆಲ್ಲ ಅಪರಾಧವಾಗಿದೆ. ನೀವು ನಿಮ್ಮ ಅಜ್ಜಿಯನ್ನೋ, ಮುತ್ತಜ್ಜಿಯನ್ನೋ ಕೇಳಿನೋಡಿ. ಅವರ ಕಾಲದಲ್ಲಿ, 17ವರ್ಷಕ್ಕೆ ಕಾಲಿಟ್ಟ ಹುಡುಗಿಯ ಮಡಿಲಲ್ಲಿ ಒಂದಾದರೂ ಮಗು ಇದ್ದೇ ಇರುತ್ತಿತ್ತು’ ಎಂದು ಹೇಳಿದ್ದರು. ನೀವು ಈ ವಿಷಯ ತಿಳಿಯಬೇಕು ಎಂದರೆ ಮನುಸ್ಮೃತಿ ಓದಬೇಕು’ ಎಂದು ಸಂತ್ರಸ್ತೆಯ ತಂದೆಗೆ ಹೇಳಿದ್ದರು.