ನವ ದೆಹಲಿ: ಮೋದಿ ಉಪನಾಮ (Modi Sir Name Case)ಕ್ಕೆ ಮಾಡಿದ ಅಪಮಾನದ ಕೇಸ್ನಲ್ಲಿ ಸೂರತ್ ಕೆಳ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ (Rahul Gandhi)ಯವರ ಮೇಲ್ಮನವಿ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮೇ 2ಕ್ಕೆ ಮುಂದೂಡಿಕೆ ಮಾಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು, ಮೋದಿ ಉಪನಾಮ ಹೊಂದಿದವರೆಲ್ಲ ಕಳ್ಳರೇ ಆಗಿರುತ್ತಾರೆ ಎಂದಿದ್ದರು. ರಾಹುಲ್ ಗಾಂಧಿ ಹೇಳಿಕೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯ ಇದೇ ಮಾರ್ಚ್ 23ರಂದು ತೀರ್ಪು ನೀಡಿ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿತ್ತು. 2 ವರ್ಷ ಜೈಲು ವಿಧಿಸಿತ್ತು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಸಂಸದನ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ಸೂರತ್ ನ್ಯಾಯಾಲಯದ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು. ಜೈಲು ಶಿಕ್ಷೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಸೆಷನ್ಸ್ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸುವ ಮೂಲಕ, ಕೆಳನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. ಹೀಗಾಗಿ ರಾಹುಲ್ ಗಾಂಧಿ ಗುಜರಾತ್ ಹೈಕೋರ್ಟ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಸೂರತ್ ಕೋರ್ಟ್ನ ಶಿಕ್ಷೆ ರದ್ದು ಮಾಡುವಂತೆ ಕೇಳಿದ್ದಾರೆ. ಸದ್ಯ ಗುಜರಾತ್ ಹೈಕೋರ್ಟ್ವಿಚಾರಣೆಯನ್ನು ಮುಂದೂಡಿದೆ.
ರಾಹುಲ್ ಗಾಂಧಿ ಸದ್ಯ ಜಾಮೀನು ಪಡೆದು ಹೊರಗೆ ಇದ್ದಾರೆ. ಅವರ ಶಿಕ್ಷೆಯನ್ನು ಯಾವುದೇ ನ್ಯಾಯಾಲಯ ರದ್ದುಗೊಳಿಸದೆ ಹೋದರೆ, ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಮತ್ತು ಅವರು ಮುಂದಿನ 8ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳುತ್ತಾರೆ. ಸೂರತ್ ಸೆಷನ್ಸ್ ಕೋರ್ಟ್ಗೆ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ಏಪ್ರಿಲ್ 30ರಂದು ವಜಾಗೊಂಡಿತ್ತು. ಅವರು ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿನ ಮಹಿಳಾ ಜಡ್ಜ್ ಗೀತಾ ಗೋಪಿ ಅವರಿಗೆ ರಾಹುಲ್ ಗಾಂಧಿ ಕೇಸ್ ವಿಚಾರಣೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ತಾವು ಮಾಡುವುದಿಲ್ಲ ಎಂದು ಹಿಂದೆ ಸರಿದಿದ್ದರು. ಅಂದಹಾಗೇ, ರಾಹುಲ್ ಗಾಂಧಿ ಪರ ಹಿರಿಯ ಕಾಂಗ್ರೆಸ್ ನಾಯಕ, ವಕೀಲ್ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುತ್ತಿದ್ದಾರೆ.
ಇದನ್ನೂ ಓದಿ: ಮೋದಿ ಸರ್ನೇಮ್ಗೆ ಅವಮಾನ; ರಾಹುಲ್ ಗಾಂಧಿ ಮೇಲ್ಮನವಿ ವಿಚಾರಣೆ ನಡೆಸಲು ಒಪ್ಪದ ಗುಜರಾತ್ ಹೈಕೋರ್ಟ್ ಮಹಿಳಾ ಜಡ್ಜ್!